ಚಂಡೀಗಢ(ಪಂಜಾಬ್): ಕಳೆದೆರಡು ದಿನಗಳ ಹಿಂದೆ ಪಂಜಾಬ್ ವಿದ್ಯುತ್ ಇಲಾಖೆ ಅಧಿಕಾರಿಗಳೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಭೆ ನಡೆಸಿದ್ದು, ಇದಕ್ಕೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ವಿಷಯದ ಬಗ್ಗ ಇದೀಗ ಪಂಜಾಬ್ ಸಿಎಂ ಭಗವಂತ್ ಮಾನ್ ಮಾತನಾಡಿದ್ದಾರೆ.
ನಾನೇ ಖುದ್ದಾಗಿ ಅರವಿಂದ್ ಕೇಜ್ರಿವಾಲ್ ಬಳಿ ನಮ್ಮ ಅಧಿಕಾರಿಗಳನ್ನು ಕಳುಹಿಸಿದ್ದೆ ಎಂದು ಹೇಳಿರುವ ಮಾನ್, ಅಗತ್ಯಬಿದ್ದರೆ ತರಬೇತಿಗಾಗಿ ಅಧಿಕಾರಿಗಳನ್ನು ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು ಮತ್ತು ಇಸ್ರೇಲ್ಗೂ ಕಳುಹಿಸುತ್ತೇನೆ. ಇದಕ್ಕೆ ಇತರರು ಆಕ್ಷೇಪ ಮಾಡುವ ಅಗತ್ಯವಿಲ್ಲ ಎಂದರು. ಅರವಿಂದ್ ಕೇಜ್ರಿವಾಲ್ ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ವಿಷಯಗಳಲ್ಲಿ ಪರಿಣಿತರಾಗಿದ್ದಾರೆ. ಹಾಗಾಗಿ, ಅವರ ಬಳಿ ತರಬೇತಿಗೆ ಏಕೆ ಕಳುಹಿಸಬಾರದು ಎಂದು ಪ್ರಶ್ನಿಸಿದರು.