ಜೈಪುರ:ಸೈಬರ್ ಅಪರಾಧಿಗಳು ಜನರಿಗೆ ಒಂದಿಲ್ಲೊಂದು ಆಮಿಷವೊಡ್ಡಿ ವಂಚಿಸಲು ಹೊಸ ಮಾರ್ಗಗಳನ್ನು ಆಶ್ರಯಿಸುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಸೈಬರ್ ವಂಚಕರು ಹೊಸ ತಂತ್ರವನ್ನು ಅನುಸರಿಸುತ್ತಿದ್ದಾರೆ. ಕ್ರೆಡಿಟ್ ಕಾರ್ಡ್ ಸಂಬಂಧಿತ ಕೊಡುಗೆಗಳ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದಾರೆ. ವಿವಿಧ ಪ್ರಸಿದ್ಧ ಬ್ಯಾಂಕ್ಗಳ ನಕಲಿ ಫೇಸ್‌ಬುಕ್ ಪುಟಗಳ ಮೂಲಕ ಜನರನ್ನು ತಮ್ಮ ಜಾಲದಲ್ಲಿ ಬೀಳಿಸುತ್ತಿದ್ದಾರೆ. ಸೈಬರ್ ಅಪರಾಧಿಗಳು ಉಚಿತ ಕ್ರೆಡಿಟ್ ಕಾರ್ಡ್, ಕ್ಯಾಶ್‌ಬ್ಯಾಕ್ ಮತ್ತು ರಿಯಾಯಿತಿ ನೀಡುತ್ತೇವೆ ಎಂಬ ಸಂದೇಶದ ಮೂಲಕ ಜನರನ್ನು ತಮ್ಮತ್ತ ಸೆಳೆದು ಮೋಸ ಮಾಡುತ್ತಿದ್ದಾರೆ.
ವಿಶೇಷವಾಗಿ ಇಂಧನ ಬೆಲೆಯನ್ನೇ ಟಾರ್ಗೆಟ್ ಮಾಡಿಕೊಂಡಿರುವ ಸೈಬರ್ ಖದೀಮರು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬಿಲ್ ಕಟ್ಟಿದರೆ ಶೇ15 ವರೆಗೆ ಸೇವ್ ಮಾಬಹುದು ಎಂದು ಹೇಳುವ ಮೂಲಕ ಜನರನ್ನು ಮೋಸದ ಬಲೆಗೆ ಬೀಳಿಸುತ್ತಿದ್ದಾರೆ.
ಸೈಬರ್ ಸೆಕ್ಯುರಿಟಿ ತಜ್ಞ ಆಯುಷ್ ಭಾರದ್ವಾಜ್ ಅವರ ಪ್ರಕಾರ, ಪ್ರಸಿದ್ಧ ಬ್ಯಾಂಕ್ಗಳ ಫೇಸ್‌ಬುಕ್ ಪುಟಗಳನ್ನು ರಚಿಸಿದ ವಂಚಕರು, ಕ್ರೆಡಿಟ್ ಕಾರ್ಡ್ ಅನ್ನು ಉಚಿತವಾಗಿ ನೀಡುವುದು, ಹೆಚ್ಚುವರಿ ಶುಲ್ಕಗಳು ಅಥವಾ ವಾರ್ಷಿಕ ಶುಲ್ಕಗಳು ಇಲ್ಲ. ಪ್ರತಿ ತಿಂಗಳು ಉಚಿತ ಚಲನಚಿತ್ರ ಟಿಕೆಟ್‌ಗಳು, ಡೀಸೆಲ್‌ನಲ್ಲಿ ಮತ್ತು ಪೆಟ್ರೋಲ್ ಬಿಲ್‌ನಲ್ಲಿ ಶೇ15ರಷ್ಟು ರಿಯಾಯಿತಿ ಮತ್ತು ಆನ್‌ಲೈನ್ ಶಾಪಿಂಗ್‌ನಲ್ಲಿ ಶೇ 15ರಷ್ಟು ರಿಯಾಯಿತಿ ಇದೆ ಎಂದು ಹೇಳಿ ಜನರನ್ನು ಮೋಸದ ಜಾಲದತ್ತ ಸುಲಭವಾಗಿ ಸೆಳೆಯುತ್ತಿದ್ದಾರೆ ಎಂದರು.
ಜನರನ್ನು ಬಲೆಗೆ ಸೆಳೆಯುವ ಕೆಲವು ವಿಧಾನಗಳು ಇಲ್ಲಿವೆ:
ಯುವಕರನ್ನು ಮುಖ್ಯವಾಗಿ ಗುರಿಯಾಗಿಸಿಕೊಂಡಿದ್ದಾರೆ:ಸೈಬರ್ ದರೋಡೆಕೋರರು ಫೇಸ್‌ಬುಕ್ ಪುಟಗಳ ಮೂಲಕ ಪೋಸ್ಟ್ ಪ್ರಾಯೋಜಕರ ಮೂಲಕ ಯುವಕರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಸೈಬರ್ ಸೆಕ್ಯುರಿಟಿ ತಜ್ಞ ಆಯುಷ್ ಭಾರದ್ವಾಜ್ ಹೇಳುತ್ತಾರೆ. ಅಲ್ಲದೇ, ಈಗಾಗಲೇ ಕ್ರೆಡಿಟ್ ಕಾರ್ಡ್ ಬಳಸುವ ಜನರು ಅಥವಾ ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಹುಡುಕುವವರು ಮುಖ್ಯವಾಗಿ ಗುರಿಯಾಗುವರು. ಈ ತಂತ್ರದಡಿಯಲ್ಲಿ, 18 ರಿಂದ 30 ವರ್ಷ ವಯಸ್ಸಿನವರಿಗೆ ತಮ್ಮ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ವಿವಿಧ ಬ್ಯಾಂಕ್ಗಳ ಜಾಹೀರಾತುಗಳನ್ನು ತೋರಿಸಲಾಗುತ್ತದೆ.
ವೈಯಕ್ತಿಕ ಮಾಹಿತಿ ಕೋರಿ ಹಗರಣ ಕರೆಗಳು:ಒಬ್ಬ ವ್ಯಕ್ತಿಯು ನಕಲಿ ಫೇಸ್‌ಬುಕ್ ಪುಟದಲ್ಲಿ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದಾಗ ಅಥವಾ ಕರೆ ಮಾಡಿದಾಗ, ತಕ್ಷಣ ಗ್ರಾಹಕರನ್ನು ಸಂಪರ್ಕಿಸಲಾಗುತ್ತದೆ ಮತ್ತು ವಿವಿಧ ಕ್ರೆಡಿಟ್ ಕಾರ್ಡ್‌ಗಳು ಮತ್ತು ಅದಕ್ಕೆ ಸಂಬಂಧಿಸಿದ ಯೋಜನೆಗಳ ಮಾಹಿತಿಯನ್ನು ವಿವರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಅವರು ಆಧಾರ್, ಪ್ಯಾನ್ ಮತ್ತು ಇತರ ವಿವರಗಳನ್ನು ಒಳಗೊಂಡಿರುವ ತಮ್ಮ ವೈಯಕ್ತಿಕ ಮಾಹಿತಿಯನ್ನು ಕಳುಹಿಸಲು ಗ್ರಾಹಕರಿಗೆ ತಿಳಿಸುತ್ತಾರೆ.
ಕ್ಯೂಆರ್ ಕೋಡ್ ಮೂಲಕ ವಂಚನೆ:ವೆಬ್‌ನಲ್ಲಿ ವ್ಯಕ್ತಿಗಳಿಂದ ಪಡೆದ ವೈಯಕ್ತಿಕ ಮಾಹಿತಿಯನ್ನು ಮಾರಾಟ ಮಾಡುತ್ತಾರೆ. ನಂತರ, ಅಪರಾಧ ಚಟುವಟಿಕೆಗಳನ್ನು ನಡೆಸಲು ಆ ವ್ಯಕ್ತಿಗಳ ವೈಯಕ್ತಿಕ ಮಾಹಿತಿಯನ್ನು ಬಳಸಿಕೊಂಡು ಸಿಮ್ ಕಾರ್ಡ್‌ಗಳನ್ನು ಖರೀದಿಸಲಾಗುತ್ತದೆ. ಇದಲ್ಲದೇ, ಯುಪಿಐ ಅಪ್ಲಿಕೇಶನ್ ಬಳಸಿ ವಾಟ್ಸ್ಆ್ಯಪ್ನಲ್ಲಿ ಕಳುಹಿಸಲಾದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ಹೇಳಿ ವಂಚಿಸುತ್ತಾರೆ.
ಸೈಬರ್ ಖದೀಮರಿಂದ ಪಾರಾಗಲು ಈ ಸಲಹೆಗಳನ್ನು ಬಳಸಿ:
ಅಧಿಕೃತ ಪೇಸ್ಬುಕ್ ಪುಟವನ್ನು ಮಾತ್ರ ಹಿಂಬಾಲಿಸಿ: ಆನ್‌ಲೈನ್‌ನಲ್ಲಿ ಕ್ರೆಡಿಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಪರಿಶೀಲಿಸಿದ ಪುಟದಲ್ಲಿ ಮಾತ್ರ ಬ್ರೌಸ್ ಮಾಡುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಸೈಬರ್ ಸೆಕ್ಯುರಿಟಿ ತಜ್ಞ ಆಯುಷ್ ಭಾರದ್ವಾಜ್ ಹೇಳುತ್ತಾರೆ. ಅಧಿಕೃತ ಬ್ಯಾಂಕ್ಗಳ ಎಲ್ಲ ಫೇಸ್‌ಬುಕ್ ಪುಟದಲ್ಲಿ ನೀಲಿ ಟಿಕ್ ಮಾರ್ಕ್ ಇರುತ್ತದೆ. ಯಾವುದೇ ಬ್ಯಾಂಕ್ ಪುಟಕ್ಕೆ ನೀಲಿ ಟಿಕ್ ಇಲ್ಲದಿದ್ದರೆ, ಆ ಪುಟವನ್ನು ಕ್ಲಿಕ್ ಮಾಡಬೇಡಿ.
ಕ್ರೆಡಿಟ್ ಕಾರ್ಡ್ ಕ್ಯಾಶ್‌ಬ್ಯಾಕ್ ಮೂಲಕ ಹಣವನ್ನು ಬ್ಯಾಂಕ್ ಠೇವಣಿ ಮಾಡಲಾಗುವುದಿಲ್ಲ: ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಡೆದ ಕ್ಯಾಶ್‌ಬ್ಯಾಕ್ ಎಂದಿಗೂ ವ್ಯಕ್ತಿಯ ಖಾತೆಗೆ ಜಮಾ ಆಗುವುದಿಲ್ಲ ಎಂದು ಗಮನಿಸಬೇಕು. ಆದ್ದರಿಂದ, ನಿಮ್ಮ ಬ್ಯಾಂಕ್ ಖಾತೆಗೆ ಕ್ರೆಡಿಟ್ ಕಾರ್ಡ್ ಕ್ಯಾಶ್‌ಬ್ಯಾಕ್ ಅನ್ನು ಠೇವಣಿ ಮಾಡುವ ಬಗ್ಗೆ ಯಾವುದೇ ವ್ಯಕ್ತಿ ನಿಮಗೆ ತಿಳಿಸಿದರೆ ಜಾಗರೂಕರಾಗಿರಿ.
ಐವಿಆರ್ಎಸ್ ಕರೆಗಳನ್ನು ಬಳಸುವಾಗ ಯಾವುದೇ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ ಅಥವಾ ಪಿನ್ ನಮೂದಿಸಬೇಡಿ: ಯಾವುದೇ ಸಂದರ್ಭದಲ್ಲಿ ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಲಾಗುವುದಿಲ್ಲ ಎಂದು ಸೈಬರ್ ಸೆಕ್ಯುರಿಟಿ ತಜ್ಞ ಆಯುಷ್ ಭಾರದ್ವಾಜ್ ಸ್ಪಷ್ಟಪಡಿಸಿದ್ದಾರೆ. ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುವಾಗ, ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಠೇವಣಿ ಮಾಡುವ ಬದಲು ಹಿಂಪಡೆಯಲಾಗುತ್ತದೆ ಎಂದು ಅವರು ಹೇಳುತ್ತಾರೆ. ಅಲ್ಲದೇ, ಐವಿಆರ್ಎಸ್ ಕರೆಗಳಿಗೆ ಹಾಜರಾಗುವಾಗ ಎಂದಿಗೂ ಬ್ಯಾಂಕ್ ಪಿನ್ ನಮೂದಿಸಬಾರದು.