ಪತ್ತನಂತಿಟ್ಟ (ಕೇರಳ):ಕೇರಳದಲ್ಲಿ ಆರ್ಥಿಕ ಸಮೃದ್ಧಿಗಾಗಿ ಇಬ್ಬರು ಮಹಿಳೆಯರನ್ನು ಬಲಿ ಕೊಟ್ಟ ಪ್ರಕರಣ ಬೆನ್ನಲ್ಲೇ ಮತ್ತೊಂದು ಇಂತಹದ್ದೇ ವಿಚಿತ್ರ ಆಚರಣೆಯ ಪ್ರಕರಣದ ಬೆಳಕಿಗೆ ಬಂದಿದೆ. ಮಾಟ ಮಂತ್ರದಲ್ಲಿ ತೊಡಗಿದ್ದ ಓರ್ವ ಮಹಿಳೆ ಮತ್ತು ಪುರುಷನನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಸ್ವಯಂ ಘೋಷಿತ ಮಹಿಳಾ ಮಾಂತ್ರಿಕ ವಿರುದ್ಧ ಸ್ಥಳೀಯರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಪತ್ತನಂತಿಟ್ಟದ ಮಲಯಾಲಪುಳದಲ್ಲಿ ಬಾಲಕನೊಬ್ಬನಿಗೆ ಮಾಟ ಮಂತ್ರ ಮಾಡುತ್ತಿರುವ ವಿಡಿಯೋ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಗುರುವಾರ ವಸಂತಿ ಅಲಿಯಾಸ್ ಶೋಭನಾ ಹಾಗೂ ಆಕೆಯ ಸಹಾಯಕ ಉನ್ನಿಕೃಷ್ಣನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಖಾಸಗಿ ಭಾಗಕ್ಕೆ ಚಾಕು ಚುಚ್ಚಿ, ಮಾಂಸ ತಿಂದ ನರಭಕ್ಷಕ.. ಕೇರಳ ನರಬಲಿ ಕೇಸ್ ತನಿಖೆಗೆ ವಿಶೇಷ ತಂಡ
ಇದೀಗ ಈ ವಿಷಯ ಸ್ಥಳೀಯರು ಮಾತನಾಡಿದ್ದು, ಬಂಧಿತ ಮಹಿಳೆ ವಸಂತಿ ವಾಮಾಚಾರ ಕೇಂದ್ರ ನಡೆಸುತ್ತಿದ್ದರು. ಈ ಕೇಂದ್ರದಲ್ಲಿ ವಿಚಿತ್ರವಾದ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದವು. ಈ ಹಿಂದೆ ಆಕೆಯೊಂದಿಗೆ ವಾಸಿಸುತ್ತಿದ್ದ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ. ಅಲ್ಲದೇ, ವಸಂತಿ ತನ್ನನ್ನು ದೈವಿ ಶಕ್ತಿ ಎಂದು ಹೇಳಿಕೊಂಡು ಅಸಭ್ಯ ಭಾಷೆ ಬಳಸುತ್ತಿದ್ದರು. ಬರ್ಮುಡಾ ಶಾರ್ಟ್ಸ್ ಧರಿಸಿ ಕುಣಿಯುತ್ತಿದ್ದರು ಎಂದು ಆರೋಪಿಸಿದ್ದಾರೆ.