ಬೆಂಗಳೂರು:ಎರಡು ತಿಂಗಳ ಹಿಂದೆ ನಾಪತ್ತೆಯಾಗಿರುವ ಬಾಲಕಿಯ ಪ್ರಕರಣವೊಂದು ಇದೀಗ ಹೆಚ್ಚು ಗಮನ ಸೆಳೆದಿದ್ದು, ಕಳೆದ ಅಕ್ಟೋಬರ್ 31ರಿಂದ ಕಾಣೆಯಾಗಿರುವ ಬಾಲಕಿ ಅಧ್ಯಾತ್ಮಿಕ ಪ್ರಭಾವಕ್ಕೊಳಗಾಗಿ ಮನೆಯಿಂದ ಹೊರಟು ಹೋಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಬಾಲಕಿ ಹುಡುಕಿಕೊಡುವಂತೆ ಅಸಹಾಯಕ ಕುಟುಂಬ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ 17 ವರ್ಷದ ಅನುಷ್ಕಾ ಎರಡು ಜೊತೆ ಬಟ್ಟೆ, 2,500 ರೂಪಾಯಿಯೊಂದಿಗೆ ಬೆಂಗಳೂರಿನಲ್ಲಿರುವ ತನ್ನ ಮನೆ ಬಿಟ್ಟು ಹೊರಟು ಹೋಗಿದ್ದು, ಎರಡು ತಿಂಗಳಾದರೂ ಆಕೆಯ ಬಗ್ಗೆ ಯಾವುದೇ ರೀತಿಯ ಸುಳಿವು ಸಿಕ್ಕಿಲ್ಲ. ಹೀಗಾಗಿ ಮೈಕ್ರೋ ಬ್ಲಾಗಿಗ್ ಮೂಲಕ ತಮ್ಮ ಮಗಳನ್ನ ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಿಂದಲೂ ಅನುಷ್ಕಾ ನಡವಳಿಕೆಯಲ್ಲಿ ಅನೇಕ ರೀತಿಯ ಬದಲಾವಣೆಗಳು ಕಂಡು ಬಂದಿದ್ದವು. ಹೆಚ್ಚಾಗಿ ಏಕಾಂಗಿಯಾಗಿರಲು ಇಚ್ಚಿಸುತ್ತಿದ್ದಳು ಎಂದು ಪೋಷಕರು ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಆಪ್ತ ಸಮಾಲೋಚಕರ ಬಳಿ ಕರೆದುಕೊಂಡು ಹೋದ ನಂತರ ನಮ್ಮೊಂದಿಗೆ ಮಾತನಾಡುವುದನ್ನ ಸಂಪೂರ್ಣವಾಗಿ ನಿಲ್ಲಿಸಿದ್ದಳು ಎಂದು ಬಾಲಕಿ ತಂದೆ ಅಭಿಷೇಕ್ ತಿಳಿಸಿದ್ದಾರೆ.