ಬೆಂಗಳೂರು :ಇವರು ಸಾಮಾನ್ಯ ಕಳ್ಳರಲ್ಲ. ಕಳ್ಳತನ ಮಾಡೋದಲ್ಲದೇ ಜೇಮ್ಸ್ ಬಾಂಡ್ ಸಿನಿಮಾದಂತೆ '007' ಎಂದು ಕೋಡ್ ನಂಬರ್ ಜೊತೆ 'ಫಿರ್ ಆಯೇಂಗೆ' (ಮತ್ತೆ ಬರ್ತೀವಿ) ಎಂದು ಗೋಡೆ ಮೇಲೆ ಬರೆದು ಪರಾರಿಯಾಗ್ತಿದ್ದರು. ಈ ಗ್ಯಾಂಗ್ ಈಗ ಬೆಂಗಳೂರು ಪೊಲೀಸರ ಅತಿಥಿಯಾಗಿದ್ದಾರೆ.
ಕೆ.ಆರ್ ಮಾರ್ಕೆಟ್ ಬಳಿ ಕಳ್ಳತನ ಮಾಡಿ ಪರಾರಿಯಾಗುತ್ತಿರುವ ಸಿಸಿಟಿವಿ ದೃಶ್ಯ ರಾಜಸ್ತಾನ ಮೂಲದ ಈ ಬಿಚ್ಚು ಗ್ಯಾಂಗ್ ಇತ್ತೀಚೆಗೆ ಬೆಂಗಳೂರಿಗೆ ಎಂಟ್ರಿ ಕೊಟ್ಟಿತ್ತು. ಆಗಸ್ಟ್ 22ರಂದು ಕೆಆರ್‌ಮಾರ್ಕೆಟ್ ಬಳಿಯ ಟೆಕ್ಸ್‌ಟೈಲ್ ಸೇಲ್ಸ್ ಕಾರ್ಪೊರೇಷನ್ ಬಟ್ಟೆ ಅಂಗಡಿಯ ಶೆಟರ್ ಮುರಿದು 25.45 ಲಕ್ಷ ರೂಪಾಯಿ ಹಣ ದೋಚಿದ್ದರು.
ಎಸ್ಕೇಪ್ ಆಗೋ ಮುನ್ನ '007 ಫಿರ್ ಆಯೇಂಗೆ' ಎಂದು ಬರೆದು ಕಾಲ್ಕಿತ್ತಿದ್ದರು. ಪೊಲೀಸರಿಗೇ ಎಚ್ಚರಿಕೆ ಕೊಡುವಂತಹ ಸಂದೇಶ ನೋಡಿ ಹಣ ಕಳೆದುಕೊಂಡವರು ಗಾಬರಿಯಾಗಿದ್ದರು. ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ: ಕ್ರಿಕೆಟ್ ಬೆಟ್ಟಿಂಗ್: ಹುಬ್ಬಳ್ಳಿಯಲ್ಲಿ ಆರು ಮಂದಿ ಅಂದರ್, ಓರ್ವ ಪರಾರಿ!
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೆಆರ್‌ಮಾರ್ಕೆಟ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಖದೀಮರ ಮೊಬೈಲ್ ಸಂಖ್ಯೆ ಮೂಲಕ ಲೊಕೇಶನ್ ಟ್ರ್ಯಾಕ್ ಮಾಡಿದ ಪೊಲೀಸರು ರಾಜಸ್ತಾನಕ್ಕೆ ತೆರಳಿ ವಾರಾನುಗಟ್ಟಲೇ ಆರೋಪಿಗಳನ್ನ ಖೆಡ್ಡಾಗೆ ಬೀಳಿಸಲು ಕಾದು ಕುಳಿತಿದ್ದರು.
ಅದರಂತೆ, ವಾರದ ನಂತರ ಕೆಆರ್‌ಮಾರ್ಕೆಟ್ ಪೊಲೀಸರಿಗೆ ಬಿಚ್ಚು ಗ್ಯಾಂಗ್ನ ಆರೋಪಿಗಳಾದ ಸುನಿಲ್, ಭರಣಿ ಸಿಂಗ್, ಆಶುರಾಮ್ ಗುಜಾರ್, ಕಿಶೋರ್ ಸಿಂಗ್ ಸೆರೆ ಸಿಕ್ಕಿದ್ದಾರೆ. ಅವರನ್ನು ಬೆಂಗಳೂರಿಗೆ ಕರೆ ತಂದಿದ್ದಾರೆ. ಅವರ ಬಳಿ ಇದ್ದ ಲಕ್ಷಗಟ್ಟಲೇ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಬಳಿ ಇದ್ದ ನಗದು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ವೇಳೆ ಆರೋಪಿಗಳು ಹೈಫೈ ಜೀವನಕ್ಕಾಗಿ ಕಳ್ಳತನ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದಾರೆ. ಹಾಗೆಯೇ, ತಮ್ಮ ಗ್ಯಾಂಗ್ನ ಹೆಸರು ಕೇಳಿದರೆ ಜನ ಬೆಚ್ಚಿ ಬೀಳಬೇಕೆಂದು 007 ಕೋಡ್ ನಂಬರ್ ಬಳಸಿದೆವು ಎಂದು ಬಾಯಿಬಿಟ್ಟಿದ್ದಾರೆ.