ನ್ಯೂಯಾರ್ಕ್ (ಅಮೆರಿಕಾ):ಸಾಂಕ್ರಮಿಕವಲ್ಲದ ರೋಗಗಳು (ಎನ್‌ಸಿಡಿ) ಮತ್ತು ಗಾಯಗಳನ್ನು ತಡೆಗಟ್ಟಿರುವುದು ಸೇರಿದಂತೆ ತಂಬಾಕು ನಿಯಂತ್ರಣಕ್ಕಾಗಿ ಶ್ರಮಿಸಿದ ಐದು ಜಾಗತಿಕ ನಗರಗಳಿಗೆ 2023ರ ಆರೋಗ್ಯಕರ ನಗರಗಳ ಪಾಲುದಾರಿಕೆ ಪ್ರಶಸ್ತಿ ನೀಡಲಾಗಿದೆ. ಅದರಲ್ಲಿ ಉದ್ಯಾನ ನಗರಿ ಬೆಂಗಳೂರು ಕೂಡಾ ಸೇರಿದೆ. ಹೌದು, ಈ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ಭಾರತೀಯ ಟೆಕ್ ಸಿಟಿ ಬೆಂಗಳೂರಿಗೆ ಡಬ್ಲ್ಯೂಎಚ್ಓದ ಜಾಗತಿಕ ಉಪಕ್ರಮದಡಿ ನಗದು ಪ್ರಶಸ್ತಿ ಲಭಿಸಿದೆ.
ಲಂಡನ್‌ನಲ್ಲಿ ನಡೆದ ಆರೋಗ್ಯಕರ ನಗರಗಳ ಶೃಂಗಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಂಗಳೂರಿಗೆ 2023ರ ಆರೋಗ್ಯಕರ ನಗರಗಳ ಪಾಲುದಾರಿಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ಮಾಂಟೆವಿಡಿಯೊ, ಮೆಕ್ಸಿಕೋ ಸಿಟಿ, ವ್ಯಾಂಕೋವರ್, ಕೆನಡಾ ಮತ್ತು ಅಥೆನ್ಸ್, ಗ್ರೀಸ್ ನಗರ ಪ್ರಶಸ್ತಿಗೆ ಆಯ್ಕೆಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಈ ನಗರಗಳು ತಮ್ಮ ಜನರ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಿವೆ. ಪುನರಾವರ್ತಿಸಬಹುದಾದ ಸಾಂಕ್ರಮಿಕವಲ್ಲದ ರೋಗ ಮತ್ತು ಗಾಯಗಳನ್ನು ತಡೆಗಟ್ಟುವಿಕೆಯ ಕಡೆಗೆ ಸಮರ್ಥನೀಯ ಮತ್ತು ಶಾಶ್ವತವಾದ ಹೆಜ್ಜೆಗಳನ್ನು ಇರಿಸಿರುವುದನ್ನು ಗುರುತಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆಯ ಪ್ರಕಾರ, ಈ ಐದು ವಿಜೇತ ನಗರಗಳು ಪಾಲುದಾರಿಕೆಯೊಂದಿಗೆ ಕೆಲಸವನ್ನು ಮುಂದುವರಿಸಲು 150,000 ಡಾಲರ್ ಹಣವನ್ನು ಗೌರವದ ರೂಪದಲ್ಲಿ ಪಡೆದಿವೆ.
ತಂಬಾಕು ನಿಯಂತ್ರಣದಲ್ಲಿ ಬೆಂಗಳೂರು ಸಾಧನೆ:ಕರ್ನಾಟಕ ರಾಜಧಾನಿ ಬೆಂಗಳೂರು ತಂಬಾಕು ನಿಯಂತ್ರಣದಲ್ಲಿ ನಿರ್ದಿಷ್ಟವಾಗಿ ಸಾಧನೆ ಮಾಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ಕಡಿಮೆ ಮಾಡುವ ಮತ್ತು ಸಾರ್ವಜನಿಕ ಧೂಮಪಾನ ನಿಷೇಧಗಳ ಮೇಲೆ ಅಸ್ತಿತ್ವದಲ್ಲಿರುವ ಆದೇಶಗಳ ಅನುಸರಣೆಯನ್ನು ಸುಧಾರಿಸುವ ಪ್ರಯತ್ನಗಳಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಇಂದು ಗುರುತಿಸಲ್ಪಟ್ಟಿರುವ ಐದು ನಗರಗಳ ಮೇಯರ್‌ಗಳು, ತಮ್ಮ ನಾಗರಿಕರ ಆರೋಗ್ಯವನ್ನು ರಕ್ಷಿಸಲು ಪ್ರಬಲವಾದ ಪ್ರಗತಿ ಸಾಧಿಸಲು ಉತ್ತಮ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದರು.
ವಿವಿಧ ನಗರಗಳ ಸಾಧನೆ ಇಲ್ಲಿದೆ ನೋಡಿ: ಸಮುದಾಯ - ಆಧಾರಿತ ಸಂಸ್ಥೆಗಳಲ್ಲಿ ಮತ್ತು ಆರೋಗ್ಯ ವೃತ್ತಿಪರರಲ್ಲಿ ಒಪಿಯಾಡ್ ಓವರ್‌ಡೋಸ್ ರಿವರ್ಸಲ್ ಏಜೆಂಟ್, ನಲೋಕ್ಸೋನ್‌ಗೆ ಪ್ರವೇಶವನ್ನು ಹೆಚ್ಚಿಸಿದ್ದಕ್ಕಾಗಿ ಅಥೆನ್ಸ್ ಅನ್ನು ಗೌರವಿಸಲಾಯಿತು. ಮೆಕ್ಸಿಕೋ ನಗರವು ರಸ್ತೆ ಸುರಕ್ಷತೆ ಮತ್ತು ಸುರಕ್ಷಿತ ಮತ್ತು ಸಕ್ರಿಯ ಚಲನಶೀಲತೆ ಸುಧಾರಿಸುವ ಮೂಲಕ ಜನನಿಬಿಡ ರಸ್ತೆಯಲ್ಲಿ ಸೈಕಲ್ ಮಾರ್ಗವನ್ನು ಪ್ರಾರಂಭಿಸಲಾಗಿದ್ದು, ಇದರಿಂದ ಸೈಕ್ಲಿಸ್ಟ್‌ಗಳಲ್ಲಿ 275 ಪ್ರತಿಶತ ಹೆಚ್ಚಳವಾಗಿದೆ.
ಮಾಂಟೆವಿಡಿಯೊ ಸರ್ಕಾರಿ ಸಂಸ್ಥೆ ಕಚೇರಿಗಳು ಮತ್ತು ಕೆಲವು ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಆಹಾರ ತಯಾರಿಕೆ ಮತ್ತು ಮಾರಾಟಕ್ಕಾಗಿ ಪೌಷ್ಟಿಕಾಂಶದ ಮಾನದಂಡಗಳನ್ನು ಸ್ಥಾಪಿಸಿತು. ಇದು ಸೋಡಿಯಂ ಕಡಿತ ನೀತಿಗಳು ಮತ್ತು ಮಾಧ್ಯಮ ಪ್ರಚಾರಗಳು ಮತ್ತು ಶೈಕ್ಷಣಿಕ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಕೇಂದ್ರೀಕರಿಸಿದೆ.
ವ್ಯಾಂಕೋವರ್ ಜನಸಂಖ್ಯೆಯ ಆರೋಗ್ಯ ಸೂಚಕಗಳನ್ನು ಟ್ರ್ಯಾಕ್ ಮಾಡುವ ಆನ್‌ಲೈನ್ ಸಾರ್ವಜನಿಕ ಆರೋಗ್ಯ ಡೇಟಾ ಉಪಕರಣವನ್ನು ಪ್ರಾರಂಭಿಸುವ ಮೂಲಕ ಸಾರ್ವಜನಿಕ ಆರೋಗ್ಯ ಡೇಟಾವನ್ನು ಹೆಚ್ಚು ಒಳಗೊಳ್ಳುವಂತೆ ಹಾಗೂ ಪ್ರವೇಶಿಸುವಂತೆ ಮಾಡಿದೆ. ದತ್ತಾಂಶ ನಿರ್ವಹಣೆಯನ್ನು ಉತ್ತಮವಾಗಿ ತಿಳಿಸಲು ನಗರ ಸ್ಥಳೀಯ ಸಮುದಾಯಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಶೃಂಗಸಭೆಯಲ್ಲಿ 50ಕ್ಕೂ ಹೆಚ್ಚು ನಗರಗಳ ಮೇಯರ್‌ಗಳು ಭಾಗಿ:ಶೃಂಗಸಭೆಯು 50ಕ್ಕೂ ಹೆಚ್ಚು ಪ್ರಮುಖ ನಗರಗಳ ಮೇಯರ್‌ಗಳು ಮತ್ತು ಅಧಿಕಾರಿಗಳನ್ನು ಒಟ್ಟುಗೂಡಿಸಿ ತುರ್ತು ಸಾರ್ವಜನಿಕ ಆರೋಗ್ಯ ಕಾಳಜಿಗಳು ಮತ್ತು ಜೀವಗಳನ್ನು ಉಳಿಸುವ ಮತ್ತು ಆರೋಗ್ಯಕರ ನಗರಗಳನ್ನು ಸೃಷ್ಟಿಸುವ ಉತ್ತಮ ಅಭ್ಯಾಸಗಳನ್ನು ಚರ್ಚಿಸಲು ಹಾಗೂ ವಿಶ್ವದ ನಗರ ಕೇಂದ್ರಗಳಲ್ಲಿನ ನಿವಾಸಿಗಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಹೃದ್ರೋಗ, ಪಾರ್ಶ್ವವಾಯು, ಕ್ಯಾನ್ಸರ್, ಮಧುಮೇಹ ಮತ್ತು ದೀರ್ಘಕಾಲದ ಉಸಿರಾಟದ ಕಾಯಿಲೆಗಳು ಸೇರಿದಂತೆ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಜಾಗತಿಕವಾಗಿ ಎಲ್ಲ ಸಾವುಗಳಲ್ಲಿ 80 ಪ್ರತಿಶತಕ್ಕೂ ಹೆಚ್ಚಾಗಿವೆ. ಹೇಳಿಕೆಯ ಪ್ರಕಾರ, ಅಪಾಯಕಾರಿ ಅಂಶಗಳಿಗೆ ಒಡ್ಡಿಕೊಳ್ಳುವುದನ್ನು ಗಣನೀಯವಾಗಿ ಕಡಿಮೆ ಮಾಡುವ ನೀತಿಗಳನ್ನು ಜಾರಿಗೊಳಿಸುವ ಮೂಲಕ ಎನ್‌ಸಿಡಿಗಳು ಮತ್ತು ಗಾಯಗಳ ವಿರುದ್ಧದ ಹೋರಾಟವನ್ನು ಪರಿವರ್ತಿಸಲು ಈ ನಗರಗಳು ಉತ್ತಮ ಸ್ಥಾನ ಪಡೆದಿವೆ.
ಡಬ್ಲ್ಯೂಎಚ್ಒ ಹೇಳಿದ್ದೇನು?:ಈ ಶೃಂಗಸಭೆಯು "ಅತ್ಯುತ್ತಮ ಅಭ್ಯಾಸಗಳು ಮತ್ತು ಸಾಬೀತಾಗಿರುವ ಮಧ್ಯಸ್ಥಿಕೆಗಳನ್ನು ಹೈಲೈಟ್ ಮಾಡಿದೆ. ಇದು ಸಾರ್ವಜನಿಕ ಆರೋಗ್ಯವು ಕೋವಿಡ್-19 ಸಾಂಕ್ರಾಮಿಕ ರೋಗವು ಪ್ರಾರಂಭವಾದ ಮೂರು ವರ್ಷಗಳ ನಂತರ, ಕಡಿಮೆ ಆದ್ಯತೆಯ ಅಪಾಯದಲ್ಲಿದೆ" ಎಂದು ಡಬ್ಲ್ಯೂಎಚ್ಒ ಹೇಳಿದೆ.
70 ನಗರಗಳನ್ನು ಒಳಗೊಂಡ ಜಾಗತಿಕ ನೆಟ್‌ವರ್ಕ್:ಬ್ಲೂಮ್‌ಬರ್ಗ್ ಫಿಲಾಂತ್ರಪೀಸ್, ಡಬ್ಲ್ಯೂಎಚ್ಒ, ವೈಟಲ್ ಸ್ಟ್ರಾಟಜೀಸ್ ಮತ್ತು ಲಂಡನ್‌ನ ಮೇಯರ್ ಸಾದಿಕ್ ಖಾನ್ ಅವರು ಲಂಡನ್‌ನಲ್ಲಿ ಶೃಂಗಸಭೆಯನ್ನು ಕರೆದ್ದಾರೆ. 2017ರಲ್ಲಿ ಸ್ಥಾಪಿತವಾದ, ಆರೋಗ್ಯಕರ ನಗರಗಳಿಗಾಗಿ ಪಾಲುದಾರಿಕೆಯು ಎನ್‌ಸಿಡಿಗಳು ಮತ್ತು ಗಾಯಗಳನ್ನು ತಡೆಗಟ್ಟಲು ಒಟ್ಟಾಗಿ ಕೆಲಸ ಮಾಡುವ 70 ನಗರಗಳನ್ನು ಒಳಗೊಂಡಿರುವ ಜಾಗತಿಕ ನೆಟ್‌ವರ್ಕ್ ಆಗಿದೆ.
ಇದನ್ನೂ ಓದಿ:ಓಮ್ರಿಕಾನ್ XBB 1.5 ತಳಿಯು ಹೆಚ್ಚು ರೂಪಾಂತರ ಹೊಂದಿದ್ದು, ಬಲು ಬೇಗ ಹರಡುತ್ತೆ!