ಶಿರಡಿ(ಮಹಾರಾಷ್ಟ್ರ):ಭಾರತದಲ್ಲಿ ಅತಿ ಹೆಚ್ಚು ಜನ ಪೂಜಿಸಲ್ಪಡುವ, ನಂಬುವ ಏಕೈಕ ಸಂತ ಎಂದರೆ ಶಿರಡಿ ಶ್ರೀ ಸಾಯಿಬಾಬಾ ಅವರಾಗಿದ್ದಾರೆ. ದೇಶದ ವಿವಿಧ ಭಾಗಗಳಿಂದ ಅದರಲ್ಲೂ ಗುರುವಾರದಂದು ಶಿರಡಿಯಲ್ಲಿರುವ ಈ ದೇಗುಲಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ತಮ್ಮ ಇಷ್ಟಾರ್ಥ ಈಡೇರಿಕೆಗೆ ಬೇಡಿಕೊಳ್ಳುವ ಭಕ್ತರು ಚಿನ್ನ, ವಜ್ರ ಸೇರಿದಂತೆ ಬೆಲೆಬಾಳುವ ಕಾಣಿಕೆಗಳನ್ನು ಸಮರ್ಪಿಸುತ್ತಾರೆ.
ಅದರಂತೆ, ಶಿರಡಿ ಸಾಯಿಬಾಬಾಗೆ ಭಕ್ತರೊಬ್ಬರು ಚಿನ್ನದ ಕಿರೀಟವನ್ನು ಅರ್ಪಿಸಿದ್ದಾರೆ. ಬೆಂಗಳೂರು ಮೂಲದ ಸಾಯಿಭಕ್ತರಾದ ದತ್ತ ಹಾಗೂ ಶಿವಾನಿ ದತ್ತ ಅವರು 928 ಗ್ರಾಂ ತೂಕದ ಚಿನ್ನದ ಕಿರೀಟವನ್ನು ಅರ್ಪಿಸುವ ಮೂಲಕ 2023ನೇ ವರ್ಷವನ್ನು ಸಾಯಿ ಬಾಬಾರ ದರ್ಶನದೊಂದಿಗೆ ಆರಂಭಿಸಿದ್ದಾರೆ.
2022ರ ಕೊನೆಯ ದಿನವನ್ನು ಎಲ್ಲರೂ ಅದ್ಧೂರಿ ಪಾರ್ಟಿ, ಮೋಜು ಮಸ್ತಿ ಮಾಡುವ ಮೂಲಕ ಬೀಳ್ಕೊಟ್ಟು, ಹೊಸ ವರ್ಷವನ್ನು ಸ್ವಾಗತಿಸುವುದು ಸಾಮಾನ್ಯವಾಗಿದೆ. ಆದರೆ ವರ್ಷದ ಕೊನೆಯ ದಿನ 2023ರ ಮೊದಲ ದಿನವೇ ದತ್ತ ದಂಪತಿ ಶಿರಡಿಗೆ ತೆರಳಿ ಸಾಯಿ ಬಾಬಾ ಸನ್ನಿಧಿಯಲ್ಲಿ ಚಿನ್ನದ ಕಿರೀಟ ಅರ್ಪಿಸಿದ್ದಾರೆ. ಈ ಕಿರೀಟವು ಸುಮಾರು 46 ಲಕ್ಷದ 70 ಸಾವಿರ ರೂ. ಮೌಲ್ಯದ್ದಾಗಿದೆ ಎನ್ನಲಾಗಿದೆ. ಸಾಯಿ ಬಾಬಾರಿಗೆ ಈ ಹಿಂದಿನಿಂದಲೂ ಅನೇಕರು ಚಿನ್ನ, ವಜ್ರ ಹಾಗೂ ಬೆಳ್ಳಿ ಸೇರಿದಂತೆ ವಿವಿಧ ಕಿರೀಟಗಳನ್ನು ಅರ್ಪಿಸುತ್ತ ಬಂದಿದ್ದಾರೆ.
ಕೆಲ ದಿನಗಳ ಹಿಂದೆ ಇಂಗ್ಲೆಂಡ್ ಮೂಲದ ಭಕ್ತರೊಬ್ಬರು ವಜ್ರ ಖಚಿತ ಚಿನ್ನದ ಕಿರೀಟ ಒಪ್ಪಿಸಿದ್ದರು. ಈ ಕಿರೀಟವು 368 ಗ್ರಾಂ ತೂಕವಿದೆ ಎಂದು ತಿಳಿದು ಬಂದಿದೆ. ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಸಾಯಿ ಭಕ್ತರಾದ ಕನಾರಿ ಸುಬಾರಿ ಪಟೇಲ್ ಎಂಬುವರು ಬೆಲೆ ಬಾಳುವ ಕಿರೀಟವನ್ನು ಸಮರ್ಪಿಸಿದ್ದರು. ಅಂದವಾದ ಕೆತ್ತನೆಗಳನ್ನು ಹೊಂದಿರುವ ಕಿರೀಟವು ನೋಡಲು ಆಕರ್ಷಕವಾಗಿದೆ.
ಶಿರಡಿಗೆ ಹರಿದುಬಂದ ಭಕ್ತಸಾಗರ:ಸಾಯಿಬಾಬಾರ ದರ್ಶನದೊಂದಿಗೆ ನೂತನ ವರ್ಷವನ್ನು ಆರಂಭಿಸಲು ಶಿರಡಿಗೆ ಭಾನುವಾರ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸಿದ್ದಾರೆ. ನಿನ್ನೆ ರಾತ್ರಿಯಿಂದಲೇ ದರ್ಶನ ನಡೆಯುತ್ತಿದ್ದು, ಇಂದು ಇಡೀ ದಿನ ಸಾಯಿ ದರ್ಶನಕ್ಕೆ ಭಕ್ತರು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದರು.