ಪಣಜಿ(ಗೋವಾ): ಬೆಂಗಳೂರು ಮೂಲದ ಕಂಪನಿಯೊಂದರ ಸಿಇಒ ಸುಚನಾ ಸೇಠ್ ಅವರು ತಮ್ಮ ನಾಲ್ಕು ವರ್ಷದ ಮಗನ ಶವ ಸಾಗಿಸಲು ಬಳಸಿದ್ದ ಬ್ಯಾಗ್ನ ಒಳಗೆ ಟಿಶ್ಯೂ ಮೇಲೆ ಐಲೈನರ್ ನಿಂದ ಗೀಚಲಾದ ಟಿಪ್ಪಣಿಯೊಂದನ್ನು ಗೋವಾ ಪೊಲೀಸರು ಪತ್ತೆ ಮಾಡಿದ್ದಾರೆ. ಕೊಲೆಯ ಉದ್ದೇಶ ಮತ್ತು ಆರೋಪಿಯ ಮಾನಸಿಕ ಸ್ಥಿತಿಯನ್ನು ತಿಳಿಯಲು ಈಗ ದೊರೆತಿರುವ ಪುರಾವೆ ನಿರ್ಣಾಯಕ ಪಾತ್ರವಹಿಸಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟಿಪ್ಪಣಿಯಲ್ಲಿ ಆರೋಪಿ, ಮಗನನ್ನು, ತನ್ನ ವಿಚ್ಛೇದಿತ ಪತಿಯ ಸುಪರ್ದಿಗೆ ನೀಡಲು ಇಷ್ಟವಿಲ್ಲ. ತನ್ನ ಪತಿ ಹಿಂಸಾತ್ಮಕ ನಡವಳಿಕೆಯನ್ನು ಹೊಂದಿದ್ದಾನೆ ಎಂದು ಆರೋಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೇಠ್ ಮತ್ತು ಅವರ ಪತಿಯ ನಡುವಿನ ವಿಚ್ಛೇದನ ಪ್ರಕ್ರಿಯೆಗಳು 2022 ರಿಂದ ನಡೆಯುತ್ತಿದೆ.
ಬಾಲಕನ ಶವ ಇರಿಸಲಾಗಿದ್ದ ಬ್ಯಾಗ್‌ನಿಂದ ಚೂರುಚೂರಾದ ನೋಟುಗಳು ಪತ್ತೆಯಾಗಿವೆ. ಭಾನುವಾರದಂದು ತಮ್ಮ ಮಗನನ್ನು ಭೇಟಿಯಾಗಲು ಪತಿಗೆ ಅವಕಾಶ ನೀಡಿರುವ ನ್ಯಾಯಾಲಯದ ತೀರ್ಪಿನಿಂದ ಸುಚನಾ ಸೇಠ್ ಅಸಮಾಧಾನಗೊಂಡಿದ್ದರು ಎಂಬುದು ತೋರುತ್ತದೆ ಎಂದು ಮೂಲಗಳು ತಿಳಿಸಿವೆ. ಬೆಳಗ್ಗೆ ಸೇಠ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಆಕೆಯ ಮಾನಸಿಕ ಸ್ಥಿತಿಯನ್ನು ಪರೀಕ್ಷಿಸಲು ಈಗಾಗಲೇ ಮಾನಸಿಕ ಪರೀಕ್ಷೆಗಳನ್ನು ನಡೆಸಲಾಗಿದೆ. ತನಿಖೆಯ ಭಾಗವಾಗಿ ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲು ಸೇಠ್ ಅವರು ಜನವರಿ 6 ರಂದು ಚೆಕ್ ಇನ್ ಮಾಡಿದ್ದ ಗೋವಾದ ಹೋಟೆಲ್ ಕೋಣೆಗೆ ಕರೆದೊಯ್ಯಲಾಗುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.