ಜಾರ್‌ಗ್ರಾಮ್ (ಪಶ್ಚಿಮ ಬಂಗಾಳ):ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಒತ್ತಾಯಿಸಿ ಕುರ್ಮಿ ಸಮುದಾಯದ 'ರೈಲು ತಡೆ' ಪ್ರತಿಭಟನೆ ಭಾನುವಾರ 6ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನಾಕಾರರು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ರೈಲ್ವೆ ಹಳಿಗಳು ಮತ್ತು ರಸ್ತೆಗಳನ್ನು ನಿರ್ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುರ್ಮಿಗಳ ಹಲವಾರು ಸಂಘಟನೆಗಳು ಪಶ್ಚಿಮ ಮೇದಿನಿಪುರ್ ಜಿಲ್ಲೆಯ ಖೇಮಸುಲಿ ಮತ್ತು ಪುರುಲಿಯಾ ಜಿಲ್ಲೆಯ ಕಸ್ತೌರ್ ನಿಲ್ದಾಣದಲ್ಲಿ ಕೋಲ್ಕತ್ತಾದಿಂದ ಮುಂಬೈಗೆ ಸಂಪರ್ಕಿಸುವ ರೈಲ್ವೆ ಹಳಿಗಳು ಮತ್ತು ಪಕ್ಕದ ಎನ್ಹೆಚ್-6 ಅನ್ನು ನಿರ್ಬಂಧಿಸಿವೆ. ರಸ್ತೆ ತಡೆ ಪರಿಣಾಮವಾಗಿ ಗುರುವಾರ(ಏ.6) 74 ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ನೂರಾರು ವಾಹನಗಳು ಸಿಲುಕಿಕೊಂಡವು. ಏ.5 ರಿಂದ ಒಟ್ಟು 496 ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಆಗ್ನೇಯ ರೈಲ್ವೆ ಇಲಾಖೆ ತಿಳಿಸಿದೆ.
ಇದನ್ನೂ ಓದಿ:ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವನ್ನು ಶೆಡ್ಯೂಲ್ 9ಕ್ಕೆ ಸೇರಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ
ಶನಿವಾರ ರದ್ದುಗೊಂಡ ರೈಲುಗಳಲ್ಲಿ ಹೌರಾ-ಚಕ್ರಧರಪುರ ಎಕ್ಸ್‌ಪ್ರೆಸ್, ಹೌರಾ-ಬೊಕಾರೊ ಸ್ಟೀಲ್ ಸಿಟಿ ಎಕ್ಸ್‌ಪ್ರೆಸ್, ರಾಂಚಿ-ಬೊಕಾರೊ ಸ್ಟೀಲ್ ಸಿಟಿ ಪ್ಯಾಸೆಂಜರ್ ವಿಶೇಷ, ಹೌರಾ-ಬಾರ್ಬಿಲ್ ಜನ ಶತಾಬ್ದಿ ಎಕ್ಸ್‌ಪ್ರೆಸ್, ಪುರುಲಿಯಾ-ಹೌರಾ ಎಕ್ಸ್‌ಪ್ರೆಸ್, ಎಲ್‌ಟಿಟಿ-ಶಾಲಿಮಾರ್ ಎಕ್ಸ್‌ಪ್ರೆಸ್, ಹೌರಾ-ಪುಣೆ ಡುರೊಂಟೊ ಎಕ್ಸ್‌ಪ್ರೆಸ್ ರೈಲುಗಳು ಸೇರಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಪುರಿ-ನವದೆಹಲಿ ಎಕ್ಸ್‌ಪ್ರೆಸ್, ಹೌರಾ- ಮುಂಬೈ ಸಿಎಸ್‌ಎಂಟಿ ಗೀತಾಂಜಲಿ ಎಕ್ಸ್‌ಪ್ರೆಸ್, ಹೌರಾ-ತಿತಾಲಗಢ ಎಕ್ಸ್‌ಪ್ರೆಸ್ ಮತ್ತು ಸಂತ್ರಗಚಿ-ಪುರುಲಿಯಾ ಎಕ್ಸ್‌ಪ್ರೆಸ್ ಅನ್ನು ಸಹ ರದ್ದುಗೊಳಿಸಲಾಗಿದೆ ಎಂದು ಅದು ಹೇಳಿದೆ.