ಕೋಲ್ಕತಾ: ಪಾಕಿಸ್ತಾನದ ಗೂಢಚಾರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್‌ನ (ಐಎಸ್ಐ) ಶಂಕಿತ ಏಜೆಂಟರು ರಾಜ್ಯದಲ್ಲಿ ನೆಲೆಯೂರಿದ್ದಾರೆ ಹಾಗೂ ಅವರು ರಾಜ್ಯವನ್ನು ತಮ್ಮ ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ನೆಲೆಯಾಗಿ ಬಳಸುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಆರೋಪಿಸಿದ್ದಾರೆ.
ಶನಿವಾರ ಎಎನ್ಐ ಜೊತೆ ಮಾತನಾಡಿದ ಮಜುಂದಾರ್, ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಪಶ್ಚಿಮ ಬಂಗಾಳದಲ್ಲಿ ನಾವು ಪಾಕಿಸ್ತಾನವನ್ನು ಪ್ರೀತಿಸುವ ಸರ್ಕಾರವನ್ನು ಹೊಂದಿದ್ದೇವೆ. ಅದರಿಂದಾಗಿಯೇ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವ ಜನರು, ವಿಶೇಷವಾಗಿ ಐಎಸ್ಐ ಏಜೆಂಟರು ರಾಜ್ಯದಲ್ಲಿ ಸುರಕ್ಷಿತ ಆಶ್ರಯ ಕಂಡುಕೊಂಡಿದ್ಧಾರೆ ಹಾಗೂ ತಮ್ಮ ದುಷ್ಕೃತ್ಯಗಳಿಗೆ ಬಂಗಾಳವನ್ನು ನೆಲೆಯಾಗಿ ಬಳಸುತ್ತಿದ್ದಾರೆ" ಎಂದು ಅವರು ಹೇಳಿದರು.
ಪಾಕಿಸ್ತಾನದ ಗೂಢಚಾರನಾಗಿ ಕೆಲಸ ಮಾಡುತ್ತಿದ್ದ 36 ವರ್ಷದ ವ್ಯಕ್ತಿಯೊಬ್ಬನನ್ನು ಶನಿವಾರ ಸಂಜೆ ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ ಎಂಬ ವರದಿಗಳ ನಂತರ ಬಿಜೆಪಿ ರಾಜ್ಯ ಮುಖ್ಯಸ್ಥರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಐಎಸ್ಐ ಶಂಕಿತನ ಬಳಿಯಿಂದ ಹಲವಾರು ಸೂಕ್ಷ್ಮ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.
ಪಾಕಿಸ್ತಾನ ಮೂಲದ ಐಎಸ್ಐ ಏಜೆಂಟರು ಮುಖ್ಯಮಂತ್ರಿ ಮತ್ತು ಅವರ ಸರ್ಕಾರದ ಬೆಂಬಲ ಹೊಂದಿದ್ದಾರೆ ಎಂದು ಬಿಜೆಪಿ ನಾಯಕ ಸುಕಾಂತ್ ಮಜುಂದಾರ್ ಆರೋಪಿಸಿದರು. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಈ ಆರೋಪಗಳಿಗೆ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವರ್ಷದ ಆರಂಭದಲ್ಲಿ ಭಾರತದ ನಕ್ಷೆಯಲ್ಲಿ 'ಆಜಾದ್ ಕಾಶ್ಮೀರ' ಎಂದು ಗುರುತಿಸಲು ವಿದ್ಯಾರ್ಥಿಗಳಿಗೆ ನಿರ್ದೇಶಿಸುವ 10 ನೇ ತರಗತಿ ಪರೀಕ್ಷಾ ಪತ್ರಿಕೆಯ ಚಿತ್ರ ವೈರಲ್ ಆದ ನಂತರ ರಾಜ್ಯದಲ್ಲಿ ಭಾರಿ ರಾಜಕೀಯ ವಿವಾದ ಭುಗಿಲೆದ್ದಿತ್ತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) 'ಆಜಾದ್ ಕಾಶ್ಮೀರ' ಎಂದು ಕರೆಯಲಾಗುತ್ತದೆ ಎಂಬುದು ಗಮನಾರ್ಹ.
ಮಜುಂದಾರ್ ಮತ್ತು ಆಗಿನ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಸೇರಿದಂತೆ ವಿವಿಧ ಬಿಜೆಪಿ ನಾಯಕರು ಪರೀಕ್ಷಾ ಪತ್ರಿಕೆಯ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಹಂಚಿಕೊಂಡ ಅವರು, ಮಮತಾ ಬ್ಯಾನರ್ಜಿ ಸರ್ಕಾರವು ಯುವಜನತೆಯ ಮನಸ್ಸುಗಳಲ್ಲಿ ಭಾರತ ವಿರೋಧಿ ಮನಸ್ಥಿತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪರೀಕ್ಷಾ ಪತ್ರಿಕೆಗಳನ್ನು ಪಶ್ಚಿಮ ಬಂಗಾಳ ಪ್ರೌಢ ಶಿಕ್ಷಣ ಮಂಡಳಿ (ಡಬ್ಲ್ಯುಬಿಬಿಎಸ್ಇ) ಪ್ರಕಟಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಸ್ ಸರ್ಕಾರ್, ಪ್ರಶ್ನೆ ಪತ್ರಿಕೆ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿದ್ದು, ಪುಸ್ತಕದ ಮಾರಾಟವನ್ನು ತಕ್ಷಣ ನಿಷೇಧಿಸುವಂತೆ ಕೋರಿದ್ದರು. ಈ ಆರೋಪಗಳನ್ನು ನಿರಾಕರಿಸಿದ ಟಿಎಂಸಿಯ ರಾಷ್ಟ್ರೀಯ ವಕ್ತಾರ ರಿಜು ದತ್ತಾ, ಪರೀಕ್ಷಾ ಪತ್ರಿಕೆಯಲ್ಲಿನ ತಪ್ಪು ಯಾರೋ ಒಬ್ಬರು ಮಾಡಿದ ವೈಯಕ್ತಿಕ ತಪ್ಪಾಗಿದೆ ಹಾಗೂ ಈ ವಿಷಯದಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದ್ದರು. (ಎಎನ್‌ಐ)
ಇದನ್ನೂ ಓದಿ : ಬಾಂಗ್ಲಾದೇಶದಲ್ಲಿ ಹಿಂಸಾಚಾರ; ಬಿಎನ್ಪಿ - ಅವಾಮಿ ಲೀಗ್ ಸಂಘರ್ಷದಲ್ಲಿ 50 ಜನರಿಗೆ ಗಾಯ