ಕೋಲ್ಕತ್ತಾ(ಪಶ್ಚಿಮ ಬಂಗಾಳ):ವಿಧಾನಸಭಾ ಚುನಾವಣೆಗೆ ಇಂದು ಎಂಟನೇ ಹಾಗೂ ಅಂತಿಮ ಹಂತದ ಮತದಾನ ನಡೆಯುತ್ತಿದ್ದು, ಹಲವೆಡೆ ಹಿಂಸಾಚಾರಗಳು ಸಂಭವಿಸಿವೆ.
ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಭದ್ರತಾ ಸಿಬ್ಬಂದಿ ಬೆಳಗ್ಗೆ ಟಿಎಂಸಿ ಅಭ್ಯರ್ಥಿಯಾದ ಅತಿನ್ ಘೋಷ್ ಬೆಲ್ಗಾಚಿಯಾದಲ್ಲಿರುವ ಮೋಹಿತ್ ಮೈತ್ರ ಮಂಚಾಗೆ ಭೇಟಿ ನೀಡಿದ್ದರು. ಈ ವೇಳೆ ಪತ್ರಕರ್ತರು ಮಾತನಾಡಲು ಯತ್ನಿಸಿದಾಗ ಅಲ್ಲಿಯೇ ಬೂತ್ ಬಳಿ ಇದ್ದ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಪತ್ರಕರ್ತರ ಗುರುತಿನ ಚೀಟಿ ಇದ್ದರೂ ಲಾಠಿ ಚಾರ್ಜ್ ಮಾಡಲಾಗಿದೆ.
ಇದನ್ನೂ ಓದಿ:ದೆಹಲಿ ಸೋಂಕಿತರಿಗೆ 'ಅನ್ನದಾತ'ರಾದ ಕೃಷಿ ಕಾಯ್ದೆ ವಿರೋಧಿ ರೈತರು
ಅನೇಕರ ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ. ಮಹಿಳಾ ಪತ್ರಕರ್ತರು, ಕ್ಯಾಮರಾಮನ್ ಮೇಲೆಯೂ ಹಲ್ಲೆ ನಡೆಸಲಾಗಿದೆ. ಇದೇ ವೇಳೆ ಸ್ಥಳಕ್ಕೆ ಪೊಲೀಸರು ಧಾವಿಸಿ, ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಗೆ ಘೇರಾವ್..!
ಮತ್ತೊಂದು ಪ್ರಕರಣದಲ್ಲಿ ಟಿಎಂಸಿ ಬೆಂಬಲಿಗರು ಬಿಜೆಪಿ ಅಭ್ಯರ್ಥಿಗೆ ಘೇರಾವ್ ಹಾಕಿ, ಕಾರನ್ನು ತಡೆಯಲು ಯತ್ನಿಸಿದ್ದಾರೆ. ಉತ್ತರ ಕೋಲ್ಕತ್ತಾದ ಮಣಿಕ್ತಲಾ ಎಂಬಲ್ಲಿ ಬಿಜೆಪಿ ಅಭ್ಯರ್ಥಿ ಕಲ್ಯಾಣ್ ಚೌಬೆ ವಿರುದ್ಧ ಟಿಎಂಸಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಮತಗಟ್ಟೆಯಲ್ಲಿ ಅಕ್ರಮ ನಡೆದಿದ್ದು, ಇದು ಟಿಎಂಸಿ ಗೂಂಡಾಗಿರಿ ಎಂದು ಬಿಜೆಪಿ ಮುಖಂಡ ಕಲ್ಯಾಣ್ ಚೌಬೆ ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳದ ಇನ್ನೂ ಹಲವೆಡೆ ಇಂಥವೇ ಪ್ರಕರಣಗಳು ವರದಿಯಾಗಿವೆ.