ಕರ್ನಾಟಕ

karnataka

ETV Bharat / bharat

ಸುಪ್ರೀಂ ಕೋರ್ಟ್‌ನಲ್ಲಿ ಬೆಳಗಾವಿ ಗಡಿ ವಿವಾದ: ಅರ್ಜಿ ವಿಚಾರಣೆಯಿಂದ ದೂರ ಸರಿದ ನ್ಯಾ.ಬಿ.ವಿ.ನಾಗರತ್ನ - ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ

ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ದೂರ ಸರಿದಿದ್ದಾರೆ.

belagavi-border-dispute-hearing-at-supreme-court-justice-b-v-nagrathna-recuses-from-hearing
ಸುಪ್ರೀಂ ಕೋರ್ಟ್‌ನಲ್ಲಿ ಬೆಳಗಾವಿ ಗಡಿ ವಿವಾದ: ಅರ್ಜಿ ವಿಚಾರಣೆಯಿಂದ ದೂರ ಸರಿದ ನ್ಯಾ.ಬಿ.ವಿ.ನಾಗರತ್ನ

By

Published : Feb 8, 2023, 2:49 PM IST

Updated : Feb 8, 2023, 6:01 PM IST

ನವದೆಹಲಿ:ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ದೂರ ಸರಿದಿದ್ದಾರೆ. ವಿವಾದದ ಕುರಿತಾಗಿ ಮಹಾರಾಷ್ಟ್ರ ಅರ್ಜಿ ಸಲ್ಲಿಸಿದ್ದು, ಬೆಳಗಾವಿ ಸೇರಿದಂತೆ ಕರ್ನಾಟಕ ಗಡಿ ಭಾಗದ ಮರಾಠಿ ಭಾಷಿಕ ಪ್ರದೇಶಗಳನ್ನು ತಮಗೆ ಸೇರಿಸಬೇಕೆಂದು ವಾದಿಸುತ್ತಿದೆ.

ಆದರೆ, ಇದನ್ನು ಅಲ್ಲಗಳೆಯುತ್ತಿರುವ ಕರ್ನಾಟಕವು ಮಹಾರಾಷ್ಟ್ರದ ಅರ್ಜಿಯನ್ನು ಪ್ರಶ್ನಿಸುತ್ತಿದೆ. ಹೀಗಾಗಿ ಸರ್ವೋಚ್ಛ ನ್ಯಾಯಾಲಯದ ಅಂತಿಮ ವಿಚಾರಣೆಯತ್ತ ಎರಡೂ ರಾಜ್ಯಗಳ ಜನರ ಚಿತ್ತ ನೆಟ್ಟಿದೆ. ಈ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್, ಹೃಷಿಕೇಶ್ ರಾಯ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಪೀಠ ನಡೆಸಬೇಕಿತ್ತು. ಆದರೆ, ವಿಚಾರಣೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಇದರ ನಡುವೆ ಕರ್ನಾಟಕದವರೂ ಆಗಿರುವ ನ್ಯಾ.ಬಿ.ವಿ.ನಾಗರತ್ನ ವಿಚಾರಣೆಯಿಂದ ದೂರ ಸರಿದಿದ್ದು, ನಿರ್ದಿಷ್ಟ ಕಾರಣವನ್ನು ಅವರು ನೀಡಿಲ್ಲ.

ಇದನ್ನೂ ಓದಿ:ಬೆಳಗಾವಿ ಗಡಿ ವಿವಾದ: ಸಾಂವಿಧಾನಿಕ ಮಾರ್ಗದ ಮೂಲಕವೇ ಪರಿಹಾರ- ಅಮಿತ್ ಶಾ

ಮಹಾರಾಷ್ಟ್ರದ ಬೇಡಿಕೆ: ಬೆಳಗಾವಿ, ಖಾನಾಪುರ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿ ಸೇರಿದಂತೆ ಗಡಿ ಭಾಗದಲ್ಲಿರುವ 865 ಮರಾಠಿ ಭಾಷಿಕ ಪ್ರದೇಶಗಳು ನಮಗೆ ಸೇರಬೇಕೆಂದು ಮಹಾರಾಷ್ಟ್ರ ಹೇಳುತ್ತಿದೆ. ಇದೇ ವಾದವನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕೂಡ ಮಂಡಿಸುತ್ತಲೇ ಬರುತ್ತಿದ್ದು, ಗಡಿ ಭಾಗದಲ್ಲಿ ಸಾಕಷ್ಟು ಹಿಂಸಾಚಾರಗಳನ್ನೂ ನಡೆಸಿದೆ. ಅಲ್ಲದೇ, ತಾನೇ ಒಪ್ಪಿಕೊಂಡ ಮಹಾಜನ ಆಯೋಗದ ವರದಿಯನ್ನು ತಿರಸ್ಕರಿಸಿ 2004ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. 19 ವರ್ಷಗಳಿಂದ ಈ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದೆ.

ಫಜಲ್‌ ಅಲಿ ಆಯೋಗದ ವರದಿ: 1953ರಲ್ಲಿ ಭಾಷೆಗಳ ಆಧಾರದ ಮೇಲೆ ರಾಜ್ಯಗಳ ವಿಂಗಡಣೆ ಆಗಬೇಕೆಂಬ ಬೇಡಿಕೆಯ ಹಿನ್ನೆಲೆಯಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಸರ್ಕಾರವು ಫಜಲ್ ಅಲಿ ಅಧ್ಯಕ್ಷತೆಯಲ್ಲಿ ಮೂರು ಸದಸ್ಯರ ಸಮಿತಿ ರಚಿಸಿತ್ತು. ಈ ಸಮಿತಿ ದೇಶದಾದ್ಯಂತ ಸಂಚರಿಸಿ ಜನರ ಅಭಿಪ್ರಾಯ ಸಂಗ್ರಹಿಸಿ 1955ರಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿ ಅಂಗೀಕರಿಸಿದ ಸರ್ಕಾರ ಭಾಷೆಗಳ ಆಧಾರದ ಮೇಲೆ ರಾಜ್ಯಗಳ ಮರುವಿಂಗಡನೆ ಮಾಡಿತ್ತು. ಆಗ ಮುಂಬೈ ಪ್ರಾಂತ್ಯದಲ್ಲಿದ್ದ ಬೆಳಗಾವಿ ಸೇರಿ ಗಡಿಭಾಗದ 865 ಗ್ರಾಮಗಳು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿದ್ದವು. ಇದಕ್ಕೆ ಮಹಾರಾಷ್ಟ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ದಶಕಗಳ ಕಾಲ ಹೋರಾಟ ನಡೆಸುತ್ತಿದೆ.

ಮಹಾಜನ್ ವರದಿ: ಅಲ್ಲದೇ, ಗಡಿ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೂ ಮಹಾರಾಷ್ಟ್ರ ಒತ್ತಡ ಹೇರಿತ್ತು. ಇದರಿಂದ 1966ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಸರ್ಕಾರ ಸುಪ್ರೀಂ ಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮೆಹರ್‌ಚಂದ್ ಮಹಾಜನ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಮಹಾಜನ್ ನೇತೃತ್ವದ ಸಮಿತಿ ಕೂಡ 1967ರಲ್ಲಿ ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ ಬೆಳಗಾವಿ ಸೇರಿ 865 ಪ್ರದೇಶಗಳು ಕರ್ನಾಟಕಕ್ಕೆ ಸೇರಿದ್ದು ಎಂದು ಉಲ್ಲೇಖಿಸಲಾಗಿತ್ತು. ಆದರೆ, ಮಹಾಜನ್ ವರದಿಯನ್ನೂ ಮಹಾರಾಷ್ಟ್ರ ಒಪ್ಪಲಿಲ್ಲ.

ಅಮಿತ್ ಶಾ ಮಧ್ಯಸ್ಥಿಕೆ: ಕಳೆದ ಡಿಸೆಂಬರ್​ನಲ್ಲೂ ಇದೇ ವಿಚಾರವಾಗಿ ಬೆಳಗಾವಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಸಮ್ಮುಖದಲ್ಲಿ ದೆಹಲಿಯಲ್ಲಿ ಸಭೆ ನಡೆಸಿದ್ದರು. ಈ ವೇಳೆ ಮಾತನಾಡಿದ ಅಮಿತ್ ಶಾ, ವಿವಾದಿತ ವಿಷಯಗಳು ಹಾದಿಬೀದಿಯಲ್ಲಿ ಚರ್ಚೆ ಆಗುವುದಲ್ಲ. ಸಾಂವಿಧಾನಿಕ ಮಾರ್ಗದಲ್ಲಿ ವಿವಾದ ಪರಿಹರಿಸಿಕೊಳ್ಳಬೇಕು. ಎರಡು ರಾಜ್ಯಗಳ ನಡುವೆ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಿ ಎಂದು ಹೇಳಿದ್ದರು.

ಇದನ್ನೂ ಓದಿ:ಗಡಿ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳದ ಸುಪ್ರೀಂ ಕೋರ್ಟ್: ಕಾನೂನು ಸಮರದಲ್ಲಿ ಯಾರಿಗೆ ಜಯ?

Last Updated : Feb 8, 2023, 6:01 PM IST

ABOUT THE AUTHOR

...view details