ಚಿಂದ್ವಾರಾ(ಮಧ್ಯಪ್ರದೇಶ):ವರದಕ್ಷಿಣೆ, ಕಿರುಕುಳ, ಆಸ್ತಿ ವಿಚಾರ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಗಂಡ ಕಟ್ಟಿಕೊಂಡ ಹೆಂಡತಿಗೆ ಚಿತ್ರಹಿಂಸೆ ನೀಡುವ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ನಿತ್ಯ ಒಂದಿಲ್ಲೊಂದು ಇಂತಹ ಪ್ರಕರಣ ಬೆಳಕಿಗೆ ಬರುತ್ತಲೇ ಇರ್ತವೆ.
ಆದರೆ, ಇಲ್ಲೊರ್ವ ಭಿಕ್ಷುಕ ಎಲ್ಲರಿಗೂ ಮಾದರಿಯಾಗುವಂತಹ ಕೆಲಸ ಮಾಡಿದ್ದಾರೆ. ವೃತ್ತಿಯಲ್ಲಿ ಭಿಕ್ಷುಕ, ವಿಕಲಚೇತನನಾಗಿದ್ರೂ, ಹೆಂಡತಿಗೆ 90 ಸಾವಿರ ರೂಪಾಯಿ ಮೌಲ್ಯದ ಉಡುಗೊರೆ ಗಿಫ್ಟ್ ಆಗಿ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.
ಮಧ್ಯಪ್ರದೇಶದ ಚಿಂದ್ವಾರಾದಲ್ಲಿ ಈ ಘಟನೆ ನಡೆದಿದ್ದು, ಭಿಕ್ಷುಕ ಪತಿಯೊಬ್ಬ ಬರೋಬ್ಬರಿ 90 ಸಾವಿರ ರೂಪಾಯಿ ಮೌಲ್ಯದ ಮೊಪೆಡ್(ತ್ರಿಚಕ್ರ ವಾಹನ) ಖರೀದಿಸಿ, ಹೆಂಡತಿಗೆ ಉಡುಗೊರೆಯಾಗಿ ನೀಡಿದ್ದಾನೆ. ಭಿಕ್ಷುಕನ ಕಾರ್ಯಕ್ಕೆ ಇನ್ನಿಲ್ಲದ ಶ್ಲಾಘನೆ ವ್ಯಕ್ತವಾಗ್ತಿದೆ. ಮೊಪೆಡ್ ಬೈಕ್ ಖರೀದಿ ಮಾಡಿರುವ ಖುಷಿಯಲ್ಲಿ ಜನರಿಗೆ, ಸಹಾಯ ಮಾಡಿದವರಿಗೆ ಸಿಹಿ ಹಂಚಿ, ಸಂಭ್ರಮಿಸಿದ್ದಾನೆ. ಇದೀಗ ಅದರ ಮೇಲೆ ಹೆಂಡತಿಯನ್ನ ಕರೆದುಕೊಂಡು ಹೋಗುತ್ತಿದ್ದಾನೆ.
ಇದನ್ನೂ ಓದಿ:ಅನಾಥ ಶಿಶುವಿಗೆ ಎದೆ ಹಾಲುಣಿಸಿದ 'ಭಿಕ್ಷುಕಿ'.. ತಾಯಿ ಪ್ರೀತಿಗೊಂದು ಸಲಾಂ!
ಏನಿದು ಘಟನೆ?:ಚಿಂದ್ವಾರಾದಲ್ಲಿ ವಿಕಲಚೇತನ ವ್ಯಕ್ತಿ ಸಂತೋಷ್ ಭಿಕ್ಷೆ ಬೇಡಿ, ಹಣ ಕೊಡಿಟ್ಟಿದ್ದಾನೆ. ಇದರಿಂದ ತ್ರಿಚಕ್ರ ವಾಹನ(ಮೊಪೆಡ್) ಖರೀದಿ ಮಾಡಿದ್ದು, ಹೆಂಡತಿಗೆ ಗಿಫ್ಟ್ ಆಗಿ ನೀಡಿದ್ದಾನೆ. ಹೆಂಡತಿಗೆ ವೃದ್ಧಾಪ್ಯದಲ್ಲಿ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿಕೊಂಡಿದ್ದಾನೆ.
ಸಂತೋಷ ಎರಡು ಕಾಲು ಕಳೆದುಕೊಂಡಿದ್ದು, ಜೀವನ ನಡೆಸಲು ಭಿಕ್ಷೆ ಬೇಡುತ್ತಿದ್ದಾನೆ. ಆತನ ಹೆಂಡತಿ ಸಹ ಇದೇ ಕೆಲಸ ಮಾಡ್ತಿದ್ದು, ಕಳೆದ ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದಳು. ಈ ವೇಳೆ, ಅವರ ಮುಂದಿನ ಭವಿಷ್ಯ ಏನು ಎಂಬುದು ಸಂತೋಷನಿಗೆ ಕಾಡತೊಡಗಿತ್ತು. ಹೀಗಾಗಿ ತ್ರಿಚಕ್ರ ವಾಹನ ಖರೀದಿ ಮಾಡಿ ಕೊಟ್ಟಿದ್ದು, ಅದರಲ್ಲಿ ಕುಳಿತುಕೊಂಡು ಭಿಕ್ಷೆ ಬೇಡುವಂತೆ ತಿಳಿಸಿದ್ದಾನೆ.
ಈ ಹಿಂದೆ ಹೆಂಡತಿ ಅಸ್ವಸ್ಥಳಾಗಿ ಆಸ್ಪತ್ರೆ ಸೇರಿದ್ದ ಸಂದರ್ಭದಲ್ಲಿ ಚಿಕಿತ್ಸೆಗಾಗಿ ಬರೋಬ್ಬರಿ 50 ಸಾವಿರ ರೂಪಾಯಿ ಖರ್ಚು ಮಾಡಿರುವುದಾಗಿ ಸಂತೋಷ್ ತಿಳಿಸಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಒಂದೊಂದು ನಾಣ್ಯ ಒಟ್ಟಿಗೆ ಸೇರಿಸಿ, ಈ ವಾಹನ ಖರೀದಿ ಮಾಡಿರುವುದಾಗಿ ತಿಳಿಸಿದ್ದಾನೆ.