ಶ್ರೀನಗರ :ಲಡಾಖ್ ವಲಯದಲ್ಲಿ ಭಾರತ ಮತ್ತು ಚೀನಾ ಸೇನೆಯ ನಡುವಿನ ಬಿಕ್ಕಟ್ಟಿನ ಮಧ್ಯೆ, ಚೀನಾ ಸೇನೆಯ ಯಾವುದೇ ಆಕ್ರಮಣಕ್ಕೆ ತಕ್ಕ ರೀತಿಯ ಪ್ರತ್ಯುತ್ತರ ನೀಡಲು ಸಿದ್ಧ ಎಂದು ಸೇನಾಪಡೆ ಇಂದು ಹೇಳಿದೆ. ಭೌತಿಕ ಗಸ್ತು ಮತ್ತು ತಾಂತ್ರಿಕ ವಿಧಾನಗಳ ಮೂಲಕ ಲಡಾಖ್‌ನಲ್ಲಿ ದೇಶದ ಸಮಗ್ರತೆ ಖಾತ್ರಿ ಪಡಿಸಲಾಗುತ್ತಿದೆ ಎಂದು ಚೀಫ್ ನಾರ್ದರ್ನ್ ಕಮಾಂಡ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.
ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಶ್ರೀನಗರದ ಜಿಒಸಿ ಪ್ರಧಾನ ಕಚೇರಿಯಲ್ಲಿ ನಡೆದ ಉತ್ತರ ಕಮಾಂಡ್ ಇನ್ವೆಸ್ಟಿಟ್ಯೂಟ್ ಸಮಾರಂಭದಲ್ಲಿ ಪ್ರಶಂಸನಾ ಪತ್ರ ವಿತರಿಸಿ ಮಾತನಾಡಿದರು. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ಉಗ್ರಗಾಮಿ ವಿರೋಧಿ ಕಾರ್ಯಾಚರಣೆಗಳಲ್ಲಿ ಅಸಾಧಾರಣ ಸಾಧನೆ ತೋರಿದ್ದಕ್ಕಾಗಿ ಕಮಾಂಡರ್ 77 ಸೇನಾ ಬೆಟಾಲಿಯನ್‌ಗಳು ಮತ್ತು ಘಟಕಗಳಿಗೆ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು.
ಯಾವುದೇ ದಾಳಿಗೆ ಪ್ರತ್ಯುತ್ತರ ಕೊಡಲು ಭಾರತೀಯ ಸೇನೆ ಸಮರ್ಥ:ಎಲ್‌ಎಸಿಯಲ್ಲಿ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಚೀನೀ ಪ್ರಯತ್ನಗಳಿಗೆ ಭಾರತೀಯ ಸಶಸ್ತ್ರ ಪಡೆಗಳು ತ್ವರಿತ, ನಿರ್ಭೀತ ಮತ್ತು ಸಂಯೋಜಿತ ಪ್ರತಿಕ್ರಿಯೆ ನೀಡಿವೆ. ಯಾವುದೇ ಪ್ರತಿಕೂಲ ಆಕ್ರಮಣಕಾರಿ ಬದಲಾವಣೆ ಅಥವಾ ಪ್ರಯತ್ನಗಳಿಗೆ ಖಂಡಿತವಾಗಿಯೂ ಸೇನಾಪಡೆಗಳ ಪ್ರಬಲ ಶಕ್ತಿಯನ್ನು ಬಳಸಿ ಉತ್ತರ ನೀಡಲಾಗುವುದು ಅವರು ಹೇಳಿದರು.
ರಾಜತಾಂತ್ರಿಕ ಮತ್ತು ಕಾರ್ಯಾಚರಣೆ ಹಂತಗಳಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ (ಎಲ್‌ಎಸಿ) ಪರಿಸ್ಥಿತಿ ಸುಧಾರಿಸುವ ಕ್ರಮಗಳು ಸಹ ಏಕಕಾಲದಲ್ಲಿ ನಡೆಯುತ್ತಿವೆ. ಪೂರ್ವ ಲಡಾಖ್‌ನಲ್ಲಿರುವ ಎಲ್‌ಎಸಿಯಲ್ಲಿ ನಮ್ಮ ಭೌತಿಕ ಗಸ್ತು ಮತ್ತು ತಾಂತ್ರಿಕ ವಿಧಾನಗಳ ಮೂಲಕ ನಾವು ನಿಯಂತ್ರಣ ಹೊಂದಿದ್ದೇವೆ ಎಂದು ಅವರು ತಿಳಿಸಿದರು. ಪ್ರಸ್ತುತ ನಡೆಯುತ್ತಿರುವ ರಷ್ಯಾ ಉಕ್ರೇನ್ ಯುದ್ಧವು ವಿಧ್ವಂಸಕ ಮತ್ತು ಡ್ಯುಯಲ್ ಯೂಸ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಅನೇಕ ಪಾಠಗಳನ್ನು ಕಲಿಸಿದೆ ಎಂದು ದ್ವಿವೇದಿ ಹೇಳಿದರು.