ವರಂಗಲ್(ತೆಲಂಗಾಣ): ವ್ಯಕ್ತಿಯೊಬ್ಬರ ಪೋಷಕರು 30 ವರ್ಷಗಳ ಹಿಂದೆ ಬೇರ್ಪಟ್ಟಿದ್ದರು. ಆದರೆ, ತಂದೆಯಿಂದ ಆತನ ತಾಯಿಗೆ ಸಿಗಬೇಕಿದ್ದ ಜೀವನಾಂಶ ಮಾತ್ರ ಸಿಕ್ಕಿರಲಿಲ್ಲ. ಆಗ ಇಂಟರ್ ಓದುತ್ತಿದ್ದ ಬಾಲಕನಾಗಿದ್ದ ಆತ ಜೀವನಾಂಶಕ್ಕಾಗಿ ತಾಯಿಯೊಂದಿಗೆ ಹಲವು ಬಾರಿ ನ್ಯಾಯಾಲಯಕ್ಕೆ ಅಲೆದಾಡಿದ್ದ. ಆದರೆ, ಫಲಿತಾಂಶ ಮಾತ್ರ ಶೂನ್ಯ ಆಗಿತ್ತು. ಅಷ್ಟಾದರೂ ಆತ ತನ್ನ ತಾಯಿಯ ಹೋರಾಟ ನಿಲ್ಲಲು ಬಿಡಲಿಲ್ಲ.
ಇದಕ್ಕಾಗಿ ಆ ವ್ಯಕ್ತಿ 30 ವರ್ಷಗಳ ನಂತರ ಸ್ವತಃ ವಕೀಲ ವೃತ್ತಿ ಕೈಗೊಂಡಿದ್ದು ವಿಶೇಷ. ಆತ ಸ್ವತಃ ಕಾನೂನು ಕೋರ್ಸ್ ಓದಿ ವಕೀಲನಾದ. ವಕೀಲನಾದ ಮೇಲೆ ಮೊಟ್ಟ ಮೊದಲಿಗೆ ತೆಗೆದುಕೊಂಡಿದ್ದೇ ತನ್ನ ತಾಯಿಯ ಜೀವನಾಂಶ ಪ್ರಕರಣ. ಅಷ್ಟೇ ಅಲ್ಲ.. ಅವರಿಗೆ ಜೀವನಾಂಶ ಕೊಡಿಸುವಲ್ಲಿ ಯಶಸ್ವಿಯೂ ಆದ.
ಪ್ರಕರಣದ ವಿವರ: 1971 ರಲ್ಲಿ, ವರಂಗಲ್ ಜಿಲ್ಲೆಯ ರಾಯಪರ್ತಿ ಮಂಡಲದ ಸಣ್ಣೂರು ಗ್ರಾಮದ ಸುಲೋಚನಾ ಅವರು ವರಂಗಲ್ ನಗರದ ಪಾಮು ಸೋಮಯ್ಯ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಶರತ್ ಬಾಬು ಮತ್ತು ರಾಜಾ ರವಿಕಿರಣ್ ಎಂಬ ಇಬ್ಬರು ಮಕ್ಕಳಿದ್ದಾರೆ. ಪತಿ ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅಂತಿಮವಾಗಿ ದಂಪತಿ 1992 ರಲ್ಲಿ ಬೇರ್ಪಟ್ಟರು. ಸುಲೋಚನಾ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ತನ್ನ ಹೆತ್ತವರ ಮನೆಗೆ ಹೋಗಿ ಅಲ್ಲಿ ಅವರನ್ನು ಬೆಳೆಸಿದರು.
ನಂತರ ಆಕೆ ತನ್ನ ಪತಿಯಿಂದ ಜೀವನಾಂಶಕ್ಕಾಗಿ ವರಂಗಲ್ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದಳು. ಈಕೆಯ ಪರವಾಗಿ 1997 ರಲ್ಲಿ ಆದೇಶ ಬಂದಿತ್ತು. ಆದರೆ, ಆಗಿನ ಇವರ ವಕೀಲರು ಇವರಿಗೆ ಸರಿಯಾದ ಮಾಹಿತಿಯನ್ನೇ ನೀಡಲಿಲ್ಲ. ಹಿರಿಯ ಮಗ ಶರತ್ ಬಾಬು ತೀರ್ಪಿನ ಪ್ರತಿ ಪಡೆಯಲು ಹಲವು ಬಾರಿ ಯತ್ನಿಸಿ ವಿಫಲನಾಗಿದ್ದ. ಹೀಗಾಗಿ ಶರತ್ ತನ್ನ ತಾಯಿಗೆ ನ್ಯಾಯ ದೊರಕಿಸಲು ವಕೀಲನಾಗಬೇಕು ಎಂದು ಬಲವಾಗಿ ಬಯಸಿದ್ದ.
ಲೋಕ್ ಅದಾಲತ್ನಲ್ಲಿ ಇತ್ಯರ್ಥ: ಕುಟುಂಬದ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಆತ ಆರಂಭದಲ್ಲಿ ಖಾಸಗಿ ಉದ್ಯೋಗ ಮಾಡಿದ್ದ. ನಂತರ 2019 ರಲ್ಲಿ ಎಲ್ಎಲ್ಬಿ ಮುಗಿಸಿ ವಕೀಲ ವೃತ್ತಿಗೆ ಸೇರಿದರು. ಕೊನೆಗೂ ಹಳೆಯ ಡಿಕ್ರಿಯ ಪ್ರತಿಯನ್ನು ಆಗಸ್ಟ್ 2021 ರಲ್ಲಿ ಪಡೆಯಲಾಯಿತು. ಅದರ ಆಧಾರದ ಮೇಲೆ, ತಂದೆಯಿಂದ ತಾಯಿಗೆ ಬರಬೇಕಾದ ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಲಾಯಿತು.
ಪ್ರಕರಣ ಲೋಕ ಅದಾಲತ್ ಮೂಲಕ ಇತ್ಯರ್ಥವಾಯಿತು. ಸುಲೋಚನಾ (62) ಅವರಿಗೆ ಆಕೆಯ ಪತಿ ಸೋಮಯ್ಯ (72) ಅವರಿಂದ ತಿಂಗಳಿಗೆ 30 ಸಾವಿರ ರೂಪಾಯಿಗಳಂತೆ ಜೀವನಾಂಶ ನೀಡಬೇಕು ಎಂದು ಸೆ.19ರಂದು ರಾಜಿ ಸಂಧಾನ ನಡೆದಿದೆ. ಕೊನೆಗೂ ಹಟ ಹಿಡಿದ ಮಗನ ಹೋರಾಟದಿಂದ 30 ವರ್ಷಗಳ ನಂತರ ತಾಯಿಗೆ ನ್ಯಾಯ ಸಿಕ್ಕಿದೆ.
ಇದನ್ನೂ ಓದಿ: ವಿವಾಹೇತರ ಸಂಬಂಧ ಹೊಂದಿದ್ದರೆ, ಪತಿಯಿಂದ ಜೀವನಾಂಶ ಪಡೆಯಲು ಮಹಿಳೆ ಅರ್ಹಳಲ್ಲ: ಕೋರ್ಟ್