ವಿವಿಧ ಸಂಸ್ಕೃತಿಗಳ ತವರೂರು ಭಾರತ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ದೇಶದಲ್ಲಿ ಹಲವು ನೃತ್ಯ ಪ್ರಕಾರಗಳಿದ್ದು, ಪ್ರೇಕ್ಷಕರಲ್ಲಿ ರಸಾನುಭವ ಉಂಟು ಮಾಡುತ್ತವೆ. ವಿವಿಧ ರಾಜ್ಯಗಳನ್ನು ಪ್ರತಿಬಿಂಬಿಸುವ ಅನೇಕ ವಿಶಿಷ್ಟ ನೃತ್ಯ ಪ್ರಕಾರಗಳು ದೇಶದ ಹೆಮ್ಮೆ. ಈ ಪೈಕಿ ಆರು ಸಾಂಪ್ರದಾಯಿಕ ನೃತ್ಯ ಪ್ರಕಾರಗಳನ್ನು ಕ್ಲಾಸಿಕಲ್ ಡ್ಯಾನ್ಸಸ್ ಎಂದು ಕರೆಯಲಾಗುತ್ತದೆ.
ದೇಶದ ಜನಪದ ನೃತ್ಯದಲ್ಲಿ ದೈಹಿಕ ಚಲನೆಗಳಿಗೆ ಹೆಚ್ಚಿನ ಆದ್ಯತೆ ಕಂಡರೆ, ಸಾಂಪ್ರದಾಯಿಕ ನಾಟ್ಯ ಪ್ರಕಾರಗಳಲ್ಲಿ ಶಿಸ್ತು ಮತ್ತು ದೇವರ ಆರಾಧನೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ವಿವಿಧ ರಾಜ್ಯಗಳಲ್ಲಿರುವ ಪ್ರಮುಖ ನೃತ್ಯ ಪ್ರಕಾರಗಳನ್ನು ನೋಡೋಣ.
ಬಿಹು- ಅಸ್ಸಾಂ: ಈಶಾನ್ಯ ಭಾರತದ ಬಿಹು ನೃತ್ಯದಲ್ಲಿ ಹೆಚ್ಚಾಗಿ ಕೈ ಚಲನೆ ಇರುತ್ತದೆ. ಕಲಾವಿದರು ಎರಡೂ ಕೈಗಳನ್ನು ರಿದಂಗೆ ತಕ್ಕಂತೆ ಚಲನೆ ಮಾಡುತ್ತಾರೆ. ಅಸ್ಸಾಂನ ಸಾಂಪ್ರದಾಯಿಕ ಉಡುಗೆ ಮತ್ತು ಆಭರಣಗಳನ್ನು ಧರಿಸುವ ನೃತ್ಯಗಾರರು ಕಣ್ಸೆಳೆಯುತ್ತಾರೆ. ಇಲ್ಲಿ ರಂಗಲಿ ಬಿಹುವನ್ನು ವಸಂತ ಋತುವಿನಲ್ಲಿ ಆಚರಿಸುತ್ತಾರೆ. ಈ ನೃತ್ಯಕ್ಕೆ ಅಲ್ಲಿನ ಸಾಂಪ್ರದಾಯಿಕ ಸಂಗೀತವನ್ನೇ ಬಳಸುವರು.
ಲಾವಣಿ- ಮಹಾರಾಷ್ಟ್ರ: ಮಹಾರಾಷ್ಟ್ರದ ಜನಪದ ಪ್ರಕಾರ ಲಾವಣಿ. ಮರಾಠ ಸಾಮ್ರಾಜ್ಯದಲ್ಲಿ ಈ ನೃತ್ಯ ಪ್ರಕಾರ ಹುಟ್ಟಿಕೊಂಡಿದೆ ಎನ್ನಲಾಗಿದೆ. ಸಾಂಪ್ರದಾಯಿಕ ಸಂಗೀತ ಮತ್ತು ಕಥೆ ಹೇಳುವ ಮೂಲಕ ಈ ನರ್ತನವನ್ನು ಮಹಿಳೆಯರು ಆಕರ್ಷಕವಾಗಿ ಪ್ರದರ್ಶಿಸುತ್ತಾರೆ. ಲಾವಣ್ಯ ಎಂಬ ಶಬ್ದದಿಂದ ಲಾವಣಿ ಬಂದಿದ್ದು, ಇದರ ಅರ್ಥ ಸೌಂದರ್ಯ ಎಂದಾಗಿದೆ.
ಗೂಮರ್- ರಾಜಸ್ಥಾನ್: ರಾಜಸ್ಥಾನದ ಈ ನೃತ್ಯದ ವೈಶಿಷ್ಟ್ಯತೆ ಎಂದರೆ ರಿದಂಗೆ ತಕ್ಕಂತೆ ಕುಣಿತದ ಜೊತೆಗೆ ಮಹಿಳೆಯರ ಉಡುಗೆ ತೊಡುಗೆ. ಕಣ್ಣು ಕೋರೈಸುವ ಆಭರಣ ಮತ್ತು ದಿರಿಸಿನೊಂದಿಗೆ ಮಾಡುವ ಈ ನೃತ್ಯ ವೃತ್ತಾಕಾರದಲ್ಲಿ ಸುತ್ತುವುದನ್ನು ಕಾಣಬಹುದು.
ರೊಫ್- ಕಾಶ್ಮೀರ: ರೊಫ್ ಎಂಬುದು ಕಾಶ್ಮೀರದ ಸಾಂಪ್ರದಾಯಿಕ ನೃತ್ಯವಾಗಿದ್ದು, ಮಹಿಳೆಯರು ಪ್ರದರ್ಶಿಸುತ್ತಾರೆ. ಕಾಶ್ಮೀರಿಗಳು ಹಬ್ಬ ಮತ್ತು ಇನ್ನಿತರ ಪ್ರಮುಖ ಸಮಾರಂಭಗಳಲ್ಲಿ ಇದನ್ನು ಪ್ರದರ್ಶಿಸುತ್ತಾರೆ.