ಥಾಣೆ (ಮಹಾರಾಷ್ಟ್ರ):ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮಲ್ಟಿಪ್ಲೆಕ್ಸ್‌ನಲ್ಲಿ ಸೋಮವಾರ ಸಂಜೆ ಮರಾಠಿ ಸಿನಿಮಾವಾದ 'ಹರ್ ಹರ್ ಮಹಾದೇವ್' ಪ್ರದರ್ಶನ ಬಲವಂತವಾಗಿ ನಿಲ್ಲಿಸಲಾಗಿದೆ. ಈ ಪ್ರದರ್ಶನವನ್ನು ನಿಲ್ಲಿಸಿದ ನಂತರ ಸಿನಿಮಾ ನೋಡಲು ಬಂದವರಿಗೆ ಥಳಿಸಿದ ಆರೋಪದಲ್ಲಿ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಜಿತೇಂದ್ರ ಅವ್ಹಾದ್ ವಿರುದ್ಧ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
‘ಹರ್ ಹರ್ ಮಹಾದೇವ್’ ಮರಾಠಿ ಸಿನಿಮಾದ ಪ್ರದರ್ಶನವನ್ನು ಬಲವಂತವಾಗಿ ನಿಲ್ಲಿಸಿದ್ದನ್ನು ಸಮರ್ಥಿಸಿಕೊಂಡಿರುವ ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಥಾಣೆ ಜಿಲ್ಲೆಯ ಮುಂಬ್ರಾ ಕ್ಷೇತ್ರದ ಎನ್‌ಸಿಪಿ ಶಾಸಕ ಜಿತೇಂದ್ರ ಅವ್ಹಾದ್, ‘ವಾಸ್ತವದಲ್ಲಿ ಎಂದೂ ನಡೆಯದ ಐತಿಹಾಸಿಕ ಘಟನೆಗಳನ್ನು ಸಿನಿಮಾ ತೋರಿಸುತ್ತಿದೆ. ಈ ರೀತಿ ಸಿನಿಮಾವನ್ನು ತೋರಿಸಬಹುದೇ? ಎಂದು ಪ್ರಶ್ನಿಸಿದ್ದಾರೆ.