ಸಹರಾನ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯೊಂದು ಸಂಪೂರ್ಣವಾಗಿ ಗಡ್ಡ ಬೋಳಿಸಿದ ಕಾರಣಕ್ಕೆ ನಾಲ್ವರು ವಿದ್ಯಾರ್ಥಿಗಳನ್ನು ವಜಾಗೊಳಿಸಿದೆ. ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಗಡ್ಡ ಹೊಂದಿರಲೇಬೇಕೆಂದು ಆದೇಶಿಸಿದೆ.
ಇದನ್ನೂ ಓದಿ:ಸಿಖ್ಖರಿಗೆ ಗಡ್ಡ, ಪೇಟ ಧರಿಸಿ ದೇಶ ಸೇವೆ ಸಲ್ಲಿಸಲು ಅನುಮತಿ ನೀಡಿದ ಅಮೆರಿಕ ನ್ಯಾಯಾಲಯ
ವಿವರ: ಫತ್ವಾಗಳ ನಗರವೆಂದು ದಿಯೋಬಂದ್ ಪಟ್ಟಣವನ್ನು ಕರೆಯುತ್ತಾರೆ. ಇಲ್ಲಿನ ಪ್ರಸಿದ್ಧ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯಾದ ದಾರುಲ್ ಉಲೂಮ್ ಈ ಆದೇಶ ಹೊರಡಿಸಿದೆ. ಗಡ್ಡ ಹೊಂದಿರದ ವಿದ್ಯಾರ್ಥಿಗಳನ್ನು ತಕ್ಷಣದಿಂದಲೇ ಶಿಕ್ಷಣ ಸಂಸ್ಥೆಯಿಂದ ವಜಾ ಮಾಡಲಾಗುತ್ತದೆ, ಹೊಸದಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಗಡ್ಡ ಬಿಡದೇ ಇದ್ದರೆ, ಅಂಥವರಿಗೂ ಪ್ರವೇಶವಿಲ್ಲ ಎಂದು ಸೋಮವಾರ ಸೂಚನಾಫಲಕದಲ್ಲಿ ನೋಟಿಸ್ ಅಂಟಿಸಲಾಗಿದೆ.
ಸಂಪೂರ್ಣವಾಗಿ ಗಡ್ಡ ಬೋಳಿಸಿದ ಕಾರಣಕ್ಕೆ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಂಡಿರುವ ಬಗ್ಗೆ ಆಡಳಿತ ಮಂಡಳಿ ನೋಟಿಸ್‌ನಲ್ಲಿ ಮಾಹಿತಿ ನೀಡಿದೆ. ಈ ನಾಲ್ವರು ವಿದ್ಯಾರ್ಥಿಗಳು ಕ್ಷಮೆ ಯಾಚಿಸಿದ್ದರು. ಆದರೆ, ಯಾವುದಕ್ಕೂ ಒಪ್ಪದೇ ಅವರನ್ನು ಸಂಸ್ಥೆಯಿಂದಲೇ ವಜಾ ಮಾಡಲಾಗಿದೆ. ಮುಂಬರುವ ವಾರ್ಷಿಕ ಪರೀಕ್ಷೆಗಳಿಗೂ ಈ ವಿದ್ಯಾರ್ಥಿಗಳಿಗೆ ಅವಕಾಶ ನೀಡುವ ಸಾಧ್ಯತೆ ಇಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ದಾರುಲ್ ಉಲೂಮ್‌ನ ಈ ಕ್ರಮವು ಮದರಸಾ ವಿದ್ಯಾರ್ಥಿಗಳಲ್ಲಿ ಸಂಚಲನ ಮೂಡಿಸಿದೆ.
ನೋಟಿಸ್‌ನಲ್ಲಿ ಏನಿದೆ?: ಇಸ್ಲಾಂನಲ್ಲಿ ಪುರುಷರು ತಮ್ಮ ಗಡ್ಡವನ್ನು ಒಂದು ಮುಷ್ಟಿ ಉದ್ದಕ್ಕೆ ಬಿಡಬೇಕು ಎಂದಿದೆ. ಒಂದು ಮುಷ್ಟಿಕ್ಕಿಂತ ಕಡಿಮೆ ಗಡ್ಡ ಹೊಂದಿರುವುದು ಮತ್ತು ಕತ್ತರಿಸುವುದು ಕಾನೂನು ಬಾಹಿರ. ಅಲ್ಲದೇ, ಈ ರೀತಿ ಕ್ಷೌರ ಮಾಡುವುದು ನಿಷೇಧಿತ ಮತ್ತು ದೊಡ್ಡ ಪಾಪ ಎಂದು ದಾರುಲ್ ಉಲೂಮ್‌ನ ಶಿಕ್ಷಣ ವಿಭಾಗದ ಮುಖ್ಯಸ್ಥ ಮೌಲಾನಾ ಹುಸೇನ್ ಅಹ್ಮದ್ ತಿಳಿಸಿದ್ದಾರೆ.
ಗಡ್ಡ ಕತ್ತರಿಸಿದ ವಿದ್ಯಾರ್ಥಿಗಳ ಉಚ್ಚಾಟನೆಯ ಕ್ರಮವನ್ನು ಇಲ್ಲಿನ ಜಾಮಿಯಾ ಶೈಖುಲ್ ಹಿಂದ್ ಪ್ರಮುಖ ಮೌಲಾನಾ ಮುಫ್ತಿ ಅಸದ್ ಕಾಸ್ಮಿ ಕೂಡ ಸಮರ್ಥಿಸಿಕೊಂಡಿದ್ದಾರೆ. ಸುನ್ನತ್ (ಪ್ರವಾದಿಯವರ ಮಾರ್ಗ) ಧಿಕ್ಕರಿಸುವವರು ಯಾರೇ ಆಗಿದ್ದರೂ, ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ.
ಸಮರ್ಥನೆ:ಪುರುಷರು ಮತ್ತು ಮಹಿಳೆಯರಿಗಾಗಿ ಸುನ್ನತ್ ಸಾಮಾಜಿಕ ಮಾರ್ಗಸೂಚಿಗಳನ್ನು ಹೇಳಿದೆ. ಜೊತೆಗೆ ಜೀವನದ ಇತರ ಪ್ರಮುಖ ಸೂಚನೆಗಳನ್ನೂ ಅದರಲ್ಲಿ ನೀಡಲಾಗಿದೆ. ನಮ್ಮ ಪ್ರವಾದಿಯವರು ನಮಗೆ ಕಲಿಸಿದ ಹಾಗೂ ಅವರ ಜೀವನದಲ್ಲಿ ಅನುಸರಿಸಿದ ಮಾರ್ಗವನ್ನು ಸಮುದಾಯದ ಪ್ರತಿಯೊಬ್ಬರು ಕೂಡ ಅನುಸರಿಸಬೇಕೆಂದು ಅಸದ್ ಕಾಸ್ಮಿ ತಿಳಿಸಿದ್ದಾರೆ.
ದಿಯೋಬಂದ್ನ ದಾರುಲ್ ಉಲೂಮ್‌ನಲ್ಲಿ ದೇಶ ಮಾತ್ರವಲ್ಲದೇ, ಬೇರೆ ದೇಶಗಳ ಮುಸ್ಲಿಂ ವಿದ್ಯಾರ್ಥಿಗಳು ಇಸ್ಲಾಮಿಕ್ ಶಿಕ್ಷಣ ಪಡೆದುಕೊಳ್ಳುತ್ತಾರೆ. ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಎಲ್ಲ ಮುಸ್ಲಿಮರಿಗೆ ಅನ್ವಯ ಮತ್ತು ಪ್ರಮುಖವೆಂದು ಪರಿಗಣಿಸಲಾಗುತ್ತಿದೆ. ಈ ಕಾರಣಕ್ಕಾಗಿಯೇ ದಿಯೋಬಂದ್ ಅನ್ನು ಫತ್ವಾಗಳ ನಗರ ಎಂದು ಕರೆಯುತ್ತಾರೆ.
ಇದನ್ನೂ ಓದಿ:ವರ ಗಡ್ಡ ಬಿಡುವಂತಿಲ್ಲ, ಅದ್ಧೂರಿ ಮದುವೆ ಮಾಡಂಗಿಲ್ಲ.. ವಿವಾಹಕ್ಕೆ ನಿಯಮ ರೂಪಿಸಿದ ಸಮುದಾಯಗಳು