ನವದೆಹಲಿ: 1995ರಲ್ಲಿ ಅಂದಿನ ಪಂಜಾಬ್ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಬಲ್ವಂತ್ ಸಿಂಗ್ ರಾಜೋನಾ ಪರವಾಗಿ ಸಲ್ಲಿಸಲಾದ ಕ್ಷಮಾದಾನ ಅರ್ಜಿಯನ್ನು ಪರಿಶೀಲಿಸುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
"ಪ್ರಕ್ರಿಯೆ ಪ್ರಾರಂಭವಾಗಿದೆ. ಭಾರತದ ರಾಷ್ಟ್ರಪತಿಗಳು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಖಲಿಸ್ತಾನ್ ವಿಷಯದ ಬಗ್ಗೆ ಪಂಜಾಬ್ ಮಾಜಿ ಮುಖ್ಯಮಂತ್ರಿಯನ್ನು ಹತ್ಯೆ ಮಾಡಿದ ಆರೋಪವನ್ನು ಬಲ್ವಂತ್ ಸಿಂಗ್ ರಾಜೋನಾ ಹೊಂದಿದ್ದಾರೆ" ಎಂದು ಸರ್ಕಾರದ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು.
ಆ ನಂತರ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ಆರು ವಾರಗಳ ಕಾಲಾವಕಾಶವನ್ನು ನೀಡಿದೆ. 'ಪ್ರಸ್ತುತ ಪರಿಸ್ಥಿತಿಗಳಲ್ಲಿ' ಕರುಣೆ ಮನವಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳ ನಿರ್ಧಾರಕ್ಕಾಗಿ ಕಾಯಬೇಕೆಂದು ಸಾಲಿಸಿಟರ್ ಜನರಲ್ ಕೋರಿದ ನಂತರ ರಾಜೋನಾ ಅವರ ಮರಣದಂಡನೆಯನ್ನು ರದ್ದುಗೊಳಿಸುವ ಮನವಿಯ ವಿಚಾರಣೆಯನ್ನು ಆರು ವಾರಗಳವರೆಗೆ ನ್ಯಾಯಪೀಠ ಮುಂದೂಡಿದೆ.