ನವದೆಹಲಿ : ಪಕ್ಷದ ಮುಖಂಡರು ಪ್ರಬಲ ಹೋರಾಟಕ್ಕೆ ಸಿದ್ಧವಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ನಾಯಕರಿಗೆ ಕರೆ ನೀಡಿದ್ದಾರೆ. ಮಂಗಳವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಪಕ್ಷ ಎಷ್ಟು ಹೆಚ್ಚು ಎತ್ತರಕ್ಕೆ ಬೆಳೆಯುತ್ತದೆಯೋ ಪ್ರತಿಪಕ್ಷಗಳ ದಾಳಿ ಅಷ್ಟೇ ತೀವ್ರವಾಗುತ್ತದೆ ಎಂದು ಹೇಳಿದರು. ಇಲ್ಲಿನ ಸಂಸತ್ ಭವನದ ಸಂಕೀರ್ಣದಲ್ಲಿ ಇಂದು ಬೆಳಗ್ಗೆ ಬಿಜೆಪಿ ಸಂಸದೀಯ ಪಕ್ಷದ ಸಭೆ ನಡೆಯಿತು. ಅಧಿವೇಶನದ ಎರಡನೇ ಹಂತದಲ್ಲಿ ಇದೇ ಮೊದಲ ಬಾರಿಗೆ ಈ ಸಭೆ ನಡೆಯುತ್ತಿದೆ.
ಸಭೆಯ ಆರಂಭದಲ್ಲಿ, ಇತ್ತೀಚೆಗೆ ಮುಕ್ತಾಯಗೊಂಡ ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಮೂರು ದೊಡ್ಡ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರನ್ನು ಬಿಜೆಪಿ ಸಂಸದರು ಅಭಿನಂದಿಸಿದರು. ಸಮ್ಮಿಶ್ರ ಸರ್ಕಾರ ಹೊಂದಿರುವ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಪಕ್ಷದ ಗೆಲುವಿಗಾಗಿ ಪ್ರಧಾನಿ ಮೋದಿಯವರನ್ನು ಪಕ್ಷದ ನಾಯಕರು ಅಭಿನಂದಿಸಿದರು. ಬಿಜೆಪಿಯ ಯಶಸ್ಸು ಹೆಚ್ಚಾದಂತೆ ಎದುರಾಳಿಗಳ ಕಡೆಯಿಂದ ದಾಳಿಗಳು ಹೆಚ್ಚಾಗುತ್ತವೆ. ಹೀಗಾಗಿ ಎಲ್ಲರೂ ಪ್ರಬಲ ಹೋರಾಟಕ್ಕೆ ಸಿದ್ಧರಾಗಿರಬೇಕು ಎಂದು ಪ್ರಧಾನಿ ಹೇಳಿದರು.
ಅದಾನಿ ಹಿಂಡೆನ್‌ಬರ್ಗ್ ವಿಷಯಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಪ್ರತಿಪಕ್ಷಗಳು ಜೆಪಿಸಿ ಒತ್ತಾಯಿಸುವುದನ್ನು ಮುಂದುವರೆಸಿರುವ ಮಧ್ಯೆ ಪ್ರಧಾನಿ ಮೋದಿಯವರ ಈ ಹೇಳಿಕೆ ಗಮನಾರ್ಹ. ಪ್ರಧಾನಿಯನ್ನು ಅವಮಾನಿಸಿದ್ದಕ್ಕಾಗಿ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಏತನ್ಮಧ್ಯೆ ಬಿಜೆಪಿ ಒತ್ತಾಯಿಸಿದೆ. ಲೋಕಸಭೆಯ ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿರುವುದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಆರೋಪಿಸಿರುವ ಪ್ರತಿಪಕ್ಷಗಳು ಈ ವಿಷಯದಲ್ಲಿ ಪ್ರತಿರೋಧವನ್ನು ಮುಂದುವರೆಸಿವೆ. ಹಾಗೆಯೇ ವೀರ್ ಸಾವರ್ಕರ್ ಮತ್ತು ಒಬಿಸಿ ಸಮುದಾಯವನ್ನು ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ಅವಮಾನಿಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಮತ್ತು ಎನ್‌ಡಿಎ ಸಂಸದರು ವಾಗ್ದಾಳಿ ನಡೆಸುತ್ತಿದ್ದಾರೆ.