ಢಾಕಾ, ಬಾಂಗ್ಲಾದೇಶ:ಕೋಮು ಹಿಂಸಾಚಾರ ಬಾಂಗ್ಲಾದೇಶದಲ್ಲಿ ಸಾಕಷ್ಟು ಸಾವು-ನೋವುಗಳಿಗೆ ಕಾರಣವಾಗಿದೆ. ಪೊಲೀಸರು ಮತ್ತು ದಾಳಿಕೋರರ ನಡುವಿನ ಘರ್ಷಣೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿಯೋರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಚಾಂದ್ಪುರದ ಹಾಜಿಗಂಜ್ನ ಲಕ್ಷ್ಮೀ ನಾರಾಯಣ ಅಖ್ರಾ ದೇವಸ್ಥಾನದ ಬಳಿ ಈ ಘರ್ಷಣೆ ನಡೆದಿದ್ದು, ಗಾಯಗೊಂಡಿದ್ದ ವ್ಯಕ್ತಿಗಳಲ್ಲಿ ಓರ್ವ ಸಾವನ್ನಪ್ಪಿದ್ದಾನೆ ಎಂದು ಹಾಜಿಗಂಜ್ ಪೊಲೀಸ್ ಠಾಣೆಯ ಅಧಿಕಾರಿ ಎಂ.ಡಿ.ಹರುನೂರ್ ರಶೀದ್ ಹೇಳಿಕೆಯನ್ನು ದಿ ಟ್ರಿಬ್ಯೂನ್ ವರದಿ ಮಾಡಿದೆ.
ಮೊದಲಿಗೆ ಗಾಯಾಳುವನ್ನು ಕೊಮಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಢಾಕಾದ ವೈದ್ಯಕೀಯ ಕಾಲೇಜು ಆಸ್ಪತ್ರೆ (DMCH) ರವಾನೆ ಮಾಡಲಾಗಿತ್ತು.
ಇದಕ್ಕೂ ಮೊದಲು ಚಾಂದ್ಪುರದ ಹಾಜಿಗಂಜ್ನಲ್ಲಿ ದುರ್ಗಾಪೂಜೆ ಸಂಭ್ರಮದ ವೇಳೆ ಹಿಂಸಾಚಾರ ನಡೆದಿದ್ದು, ಮೂವರು ಸಾವನ್ನಪ್ಪಿ ಪೊಲೀಸರು, ಪತ್ರಕರ್ತರು, ಸಾಮಾನ್ಯ ನಾಗರಿಕರು ಸೇರಿ 60 ಮಂದಿ ಗಾಯಗೊಂಡಿದ್ದರು.