ಲಂಡನ್: ಅಶ್ಲೀಲ ಫೋಟೋಗಳಿಗಾಗಿ ಬಾಲಕನಿಗೆ ಹಣ ನೀಡಿದ ಆರೋಪದ ಮೇಲೆ ಪ್ರಮುಖ ನಿರೂಪಕನನ್ನು ಅಮಾನತುಗೊಳಿಸಲಾಗಿದೆ ಎಂದು ಬ್ರಿಟೀಷ್ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಶನ್(ಬಿಬಿಸಿ) ಭಾನುವಾರ ತಿಳಿಸಿದೆ. ಪ್ರಚೋದನ್ಮಾತಕ ಹಾಗೂ ಅಸಭ್ಯಕರವಾಗಿ ಚಿತ್ರ ತೆಗೆಯಿಸಿಕೊಳ್ಳಲು ಬಿಬಿಸಿ ವಾಹಿನಿಯ ನಿರೂಪಕರೊಬ್ಬರು ಬಾಲಕನಿಗೆ ಹಣ ನೀಡಿದ್ದಾರೆ ಎಂಬ ಆರೋಪ ಕುರಿತು ತನಿಖೆ ನಡೆಸಬೇಕು ಎಂದು ಬ್ರಿಟನ್‌ನ ಹಿರಿಯ ರಾಜಕಾರಣಿಗಳು ಸುದ್ದಿಸಂಸ್ಥೆಗೆ ಒತ್ತಾಯಿಸಿದ್ದರು. ಅದರಂತೆ ಸಂಕೀರ್ಣ ಮತ್ತು ವೇಗವಾಗಿ ಬದಲಾಗುವ ಸನ್ನಿವೇಶಗಳ ಸತ್ಯಗಳನ್ನು ಕಂಡು ಹಿಡಿಯಲು ಅದು ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಸಾರಕರು ಹೇಳಿದ್ದಾರೆ.
ಸುದ್ದಿಸಂಸ್ಥೆಯ ಪುರುಷ ನಿರೂಪಕರೊಬ್ಬರು 17 ವರ್ಷದ ಬಾಲಕನಿಗೆ 35 ಸಾವಿರ ಪೌಂಡ್ ನೀಡಿದ್ದರು ಎಂದು ಸ್ಥಳೀಯ 'ದಿ ಸನ್' ದಿನಪತ್ರಿಕೆ ವರದಿ ಮಾಡಿತ್ತು. ಹಣ ನೀಡಿದ್ದ ಆರೋಪ ಕುರಿತಂತೆ ಬಿಬಿಸಿಯು ಪ್ರಸ್ತುತ ನಿರೂಪಕನನ್ನು ಅಮಾನತು ಮಾಡಿದೆ. ಆದರೆ, ನಿರೂಪಕ ಅಥವಾ ಬಾಲಕನ ಗುರುತು ಪತ್ತೆಯಾಗಿಲ್ಲ. ಆದರೆ ಆ ನಿರೂಪಕ ಯಾರಿರಬಹುದು ಎಂಬ ಬಗ್ಗೆ ಜಾಲದಾಣಗಳಲ್ಲಿ ವದಂತಿ, ಚರ್ಚೆ ನಡೆದಿದೆ. ಹೀಗಾಗಿ, ಬಿಬಿಸಿಯ ಹೆಸರಾಂತ ನಿರೂಪಕರು ಸ್ವಯಂಪ್ರೇರಿತವಾಗಿ 'ಆ ನಿರೂಪಕ ನಾನಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.
ಬ್ರಿಟನ್‌ನಲ್ಲಿ ಲೈಂಗಿಕತೆಗೆ ಸಮ್ಮತಿ ನೀಡಲು ಕಾನೂನು ಪ್ರಕಾರ ಗರಿಷ್ಠ ವಯೋಮಾನ 16 ವರ್ಷ. ಆದರೆ 18 ವರ್ಷದೊಳಗಿನವರನ್ನು ಅಸಭ್ಯ ರೀತಿಯಲ್ಲಿ ಚಿತ್ರ ತೆಗೆಯಿಸಿಕೊಳ್ಳುವಂತೆ ಪ್ರಚೋದಿಸುವುದು ಅಪರಾಧ. ದಿ ಸನ್ ದಿನಪತ್ರಿಕೆಯ ವರದಿ ಪ್ರಕಾರ ಬಾಲಕನ ತಾಯಿ ಮೇ ತಿಂಗಳಲ್ಲಿಯೇ ಬಿಬಿಸಿ ಸುದ್ದಿ ಸಂಸ್ಥೆಗೆ ನಿರೂಪಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದ್ದರು. ಆದರೆ ನಿರೂಪಕರು ಪ್ರಸಾರದಲ್ಲಿಯೇ ಉಳಿದಿದ್ದಾರೆ ಎಂದು ದಿ ಸನ್ ಹೇಳಿದೆ.