ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ವಿವಾದದ ಹಿನ್ನೆಲೆ ಗಲಭೆ ಸೃಷ್ಟಿಸಿದ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ನಾಲ್ವರು ವಿದ್ಯಾರ್ಥಿಗಳನ್ನು ನವದೆಹಲಿ ಪೊಲೀಸರು ಜಾಮಿಯಾ ಮಿಲಿಯಾ ಇಸ್ಲಾಂ (ಜೆಎಂಐ) ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಬುಧವಾರ ಬಂಧಿಸಿದ್ದಾರೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)ಯ ಯುವ ಘಟಕವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಪ್ರಧಾನಿ ನರೇಂದ್ರ ಮೋದಿ ಅವರ ವಿವಾದಾತ್ಮಕ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಆಯೋಜಿಸುವುದಾಗಿ ಘೋಷಿಸಿದ ನಂತರ ಗಲಾಟೆ ಪ್ರಕರಣ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಾದ ಅಜೀಜ್, ನಿವೇದ್ಯ, ಅಭಿರಾಮ್ ಮತ್ತು ತೇಜಸ್ ಎಂಬುವವರನ್ನು ಬಂಧಿಸಲಾಗಿದೆ.
ಕ್ಯಾಂಪಸ್‌ನಲ್ಲಿ ಕರಪತ್ರವನ್ನು ಬಿಡುಗಡೆ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ (ಜೆಎನ್‌ಯುಎಸ್‌ಯು) ಮಂಗಳವಾರ ಸಾಕ್ಷ್ಯಚಿತ್ರ ಪ್ರದರ್ಶನ ಮಾಡುವುದಾಗಿ ಸೋಮವಾರ ಕ್ಯಾಂಪಸ್‌ನಲ್ಲಿ ಕರಪತ್ರವನ್ನು ಬಿಡುಗಡೆಗೊಳಿಸಿತ್ತು. ಈ ಬೆಳವಣಿಗೆ ನಡೆದ ಬೆನ್ನಲ್ಲೇ ಆಡಳಿತ ಮಂಡಳಿ ಎಚ್ಚರಿಕೆಯನ್ನು ನೀಡಿತ್ತು. ಜೆಎನ್‌ಯು ಆಡಳಿತ ಮಂಡಳಿಯು ಪ್ರಧಾನಿ ಮೋದಿ ಅವರ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ನಿಷೇಧ ಹೇರಿತ್ತು. ಈ ಸಾಕ್ಷ್ಯ ಚಿತ್ರವನ್ನು ಕ್ಯಾಂಪಸ್‌ನಲ್ಲಿ ಪ್ರದರ್ಶನ ಮಾಡುವುದರಿಂದ 'ಶಾಂತಿ ಮತ್ತು ಸಾಮರಸ್ಯ' ಹದಗೆಡಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ :ಮತದಾನ ಗಣರಾಜ್ಯಕ್ಕೆ ಯಜ್ಞವಿದ್ದಂತೆ: ಒಂದು ಮತವೂ ಸಹ ಗೆಲುವು ಸೋಲು ನಿರ್ಧರಿಸುತ್ತೆ: ಥಾವರ್ ಚಂದ್ ಗೆಹ್ಲೋಟ್
ಕ್ಯಾಂಪಸ್‌ನ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟಾಗಬಹುದು: ಜೆಎನ್‌ಯುಎಸ್‌ಯು ಹೆಸರಿನಲ್ಲಿ ವಿದ್ಯಾರ್ಥಿಗಳ ಗುಂಪು ಜನವರಿ 24 ರಂದು ರಾತ್ರಿ 9 ಗಂಟೆಗೆ 'ಭಾರತ: ಮೋದಿ ಪ್ರಶ್ನೆ' ಎಂಬ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಕರಪತ್ರವನ್ನು ಬಿಡುಗಡೆ ಮಾಡಿರುವುದು ಆಡಳಿತದ ಗಮನಕ್ಕೆ ಬಂದಿದೆ. ಈ ಕಾರ್ಯಕ್ರಮಕ್ಕೆ ಜೆಎನ್‌ಯು ಆಡಳಿತ ಮಂಡಳಿಯಿಂದ ಅನುಮತಿ ತೆಗೆದುಕೊಳ್ಳಲಾಗಿಲ್ಲ. ಇಂತಹ ಅನಧಿಕೃತ ಚಟುವಟಿಕೆಯು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟಾಗಬಹುದು ಎಂದು ತಿಳಿಸಿದೆ.