ಹೈದರಾಬಾದ್: ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗಳಿಗೆ ನಡೆದ ಚುನಾವಣೆಗಳ ಮತ ಎಣಿಕೆಯು ಭಾನುವಾರ ಬೆಳಗ್ಗೆ (ಮೇ 2 ರಂದು) ಆರಂಭವಾಗಲಿದ್ದು, ಯಾವ ರಾಜ್ಯದಲ್ಲಿ ಯಾರು ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ ಎಂಬ ಬಗೆಗಿನ ವಿಶ್ಲೇಷಣೆಗಳು, ಊಹಾಪೋಹಗಳು ಜನರಲ್ಲಿ ಇನ್ನಿಲ್ಲದ ಕುತೂಹಲ ಮೂಡಿಸಿವೆ.
ಪಶ್ಚಿಮ ಬಂಗಾಳ, ಅಸ್ಸೋಂ, ತಮಿಳುನಾಡು, ಕೇರಳ ರಾಜ್ಯಗಳು ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗಳಿಗೆ ಕಳೆದ ಫೆ.26 ರಂದು ಭಾರತ ಚುನಾವಣಾ ಆಯೋಗವು ಚುನಾವಣಾ ಅಧಿಸೂಚನೆಯನ್ನು ಹೊರಡಿಸಿತ್ತು. ಈಗ ಈ ಎಲ್ಲ ರಾಜ್ಯಗಳ ಚುನಾವಣೆ ಮುಗಿದಿದ್ದು, ಮತ ಎಣಿಕೆ ಮಾತ್ರ ಬಾಕಿ ಇದೆ. ಐದು ರಾಜ್ಯಗಳಲ್ಲಿ ಹರಡಿದ ಒಟ್ಟು 824 ವಿಧಾನಸಭಾ ಕ್ಷೇತ್ರಗಳಿಗೆ 2.7 ಲಕ್ಷ ಮತಗಟ್ಟೆಗಳಲ್ಲಿ ಮತದಾನ ನಡೆದು, ಸುಮಾರು 18.68 ಕೋಟಿ ಮತದಾರರು ತಮ್ಮ ಪರಮಾಧಿಕಾರ ಚಲಾಯಿಸಿದ್ದರು. ರವಿವಾರ ಬೆಳಗ್ಗೆ ಮತ ಯಂತ್ರಗಳು ಸ್ಟ್ರಾಂಗ್ ರೂಂ ಗಳಿಂದ ಹೊರಗೆ ಬರಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿವೆ.
(ಓದಿ ಪಂಚರಾಜ್ಯ ಫೈಟ್: ಯಾವ ರಾಜ್ಯದಲ್ಲಿ ಯಾರಿಗೆ ಗದ್ದುಗೆ? ಈಟಿವಿ ಭಾರತ ಎಕ್ಸಿಟ್ ಪೋಲ್ ಇಲ್ಲಿದೆ ನೋಡಿ...
ಯಾವ ರಾಜ್ಯದಲ್ಲಿ ಯಾವೆಲ್ಲ ವಿಷಯಗಳು ಚುನಾವಣೆಯ ಪ್ರಮುಖ ಅಂಶವಾಗಿದ್ದವು, ಮತದಾನೋತ್ತರ ಸಮೀಕ್ಷೆಗಳು ಏನು ಹೇಳುತ್ತವೆ ಹಾಗೂ ಇನ್ನಿತರ ಕೆಲ ರೋಚಕ ಅಂಕಿ-ಅಂಶಗಳ ಬಗ್ಗೆ ಒಂದು ಸಿಂಹಾವಲೋಕನ ಇಲ್ಲಿದೆ.
ಅಸ್ಸೋಂ
126 ಸದಸ್ಯ ಬಲದ ಅಸ್ಸೋಂ ವಿಧಾನ ಸಭೆಗೆ 3 ಹಂತಗಳಲ್ಲಿ ಚುನಾವಣೆ ನಡೆದಿದೆ.
ಪ್ರಮುಖ ಚುನಾವಣಾ ವಿಷಯಗಳು ಮತ್ತು ಮತದಾರರ ಒಲವು
ಅಸ್ಸೋಂ ನಲ್ಲಿ ಕಳೆದ ಐದು ವರ್ಷಗಳ ಕಾಲ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ತಾನು ಐದು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿಯ ಸಾಧನೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತೊಮ್ಮೆ ಮತದಾರರ ಬಳಿ ಹೋಗಿತ್ತು. ಇನ್ನು ಈ ಮಧ್ಯೆ ನಾಗರಿಕತೆ ತಿದ್ದುಪಡಿ ಕಾಯ್ದೆ ವಿಷಯವು ರಾಜ್ಯದಲ್ಲಿ ಸಾಕಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಪ್ರತಿಪಕ್ಷಗಳು ಇದೇ ವಿಷಯವನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಿವೆ. ಈ ಎರಡೂ ವಿಷಯಗಳ ಮಧ್ಯೆ ಮತದಾರ ಯಾವುದಕ್ಕೆ ಮನ್ನಣೆ ನೀಡುತ್ತಾನೆ ಎಂದು ನೋಡಬೇಕಿದೆ.
ಪ್ರಮುಖ ಕ್ಷೇತ್ರ ಹಾಗೂ ಅಭ್ಯರ್ಥಿಗಳು
ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಅಸ್ಸೋಂ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನೇತಾರ ಸರ್ಬಾನಂದ ಸೋನೊವಾಲ್, ಬಿಜೆಪಿಯ ಹಿಮಂತಾ ಬಿಸ್ವಾ ಶರ್ಮಾ, ಅಸೋಂ ಗಣ ಪರಿಷದ್ನ ಅತುಲ್ ಬೋರಾ, ಎಐಯುಡಿಎಫ್ ನ ಬದ್ರುದ್ದೀನ್ ಅಜ್ಮಲ್, ಅಸ್ಸೋಂ ಪ್ರದೇಶ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ರಿಪುನ್ ಬೋರಾ ಮತ್ತು ಜೈಲಿನಲ್ಲಿರುವ ಸಿಎಎ ವಿರೋಧಿ ಹೋರಾಟಗಾರ ಅಖಿಲ್ ಗೋಗೊಯ್ ಚುನಾವಣಾ ಕಣದಲ್ಲಿರುವ ಪ್ರಮುಖ ನಾಯಕರಾಗಿದ್ದಾರೆ.
ಎಕ್ಸಿಟ್ ಪೋಲ್ ಹೇಳುವುದೇನು?
ಕೆಲವೇ ಕೆಲ ಮತದಾರರ ಹೇಳಿಕೆಗಳನ್ನು ಆಧರಿಸಿ ತಯಾರಿಸಲಾದ ಮತದಾನೋತ್ತರ ಸಮೀಕ್ಷೆಗಳು ನೂರಕ್ಕೆ ನೂರರಷ್ಟು ಖಚಿತ ಮಾಹಿತಿ ನೀಡಲು ಸಾಧ್ಯವಿಲ್ಲ. ಆದರೂ ಇವುಗಳಿಂದ ಮತದಾರರ ಚಿತ್ತ ಯಾವ ಕಡೆ ಇದೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಯಬಹುದು.
ಈಟಿವಿ ಭಾರತ ನಡೆಸಿದ ಎಕ್ಸಿಟ್ ಪೋಲ್ ಪ್ರಕಾರ, 126 ಸ್ಥಾನಗಳ ಪೈಕಿ ಬಿಜೆಪಿ ಮೈತ್ರಿಕೂಟವು 64 ಹಾಗೂ ಕಾಂಗ್ರೆಸ್ ಬೆಂಬಲಿತ ಎಐಯುಡಿಎಫ್ ಮೈತ್ರಿಕೂಟವು 55 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಹೊಸದಾಗಿ ರಚಿತವಾದ ಅಸೋಂ ಜತಿಯಾ ಪರಿಷದ್ (ಎಜೆಪಿ), ಬಂಧಿತ ಸಿಎಎ ವಿರೋಧಿ ಹೋರಾಟಗಾರ ಅಖಿಲ್ ಗೋಗೊಯ್ ಸ್ಥಾಪಿಸಿದ ರೈಜೋರ್ ದಳ ಹಾಗೂ ಪಕ್ಷೇತರರು ಒಟ್ಟಾಗಿ 7 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಅಂದಾಜು ಮಾಡಲಾಗಿದೆ. ಬಹುತೇಕ ರಾಷ್ಟ್ರೀಯ ವಾಹಿನಿಯ ಸಮೀಕ್ಷೆಗಳು ಅಧಿಕಾರಾರೂಢ ಬಿಜೆಪಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ.
ತಮಿಳು ನಾಡು
234 ಸದಸ್ಯ ಬಲದ ತಮಿಳು ನಾಡು ವಿಧಾನ ಸಭೆಗೆ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ.
ಪ್ರಮುಖ ಚುನಾವಣಾ ವಿಷಯಗಳು ಮತ್ತು ಮತದಾರರ ಒಲವು
ರಾಜ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಅಧಿಕಾರಾರೂಢ ಎಐಎಡಿಎಂಕೆ ಹಾಗೂ ಡಿಎಂಕೆ ಗಳ ಮಧ್ಯೆ ನೇರ ಸ್ಪರ್ಧೆ ಇದೆ. "ಸ್ಥಳೀಯರು ಹಾಗೂ ಹೊರಗಿನವರು" ಎಂಬ ವಿಷಯವನ್ನೇ ಡಿಎಂಕೆ ಪ್ರಮುಖವಾಗಿ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಒಂದೊಮ್ಮೆ ಎಐಎಡಿಎಂಕೆ ಗೆ ಮತ ನೀಡಿದಲ್ಲಿ ಅದರಿಂದ ಬಿಜೆಪಿಗೆ ನೇರವಾಗಿ ಲಾಭವಾಗಿ, ತಮಿಳು ನಾಡು ಸರ್ಕಾರವು ದೆಹಲಿಯಿಂದ ನಡೆಸಲ್ಪಡುವ ಅಪಾಯವಿದೆ ಎಂದು ಡಿಎಂಕೆ ಪ್ರಚಾರ ನಡೆಸಿತ್ತು. ಭ್ರಷ್ಟಾಚಾರ, ನೀಟ್ ಪರೀಕ್ಷೆ ಹಾಗೂ ಕೊರೊನಾ ವೈರಸ್ ಹಾವಳಿ ತಡೆಯುವುದೇ ಈ ಬಾರಿ ಇಲ್ಲಿನ ಪ್ರಮುಖ ಚುನಾವಣಾ ವಿಷಯಗಳಾಗಿದ್ದವು.
ಪ್ರಮುಖ ಕ್ಷೇತ್ರ ಹಾಗೂ ಅಭ್ಯರ್ಥಿಗಳು
ಸದ್ಯ ಮುಖ್ಯಮಂತ್ರಿಯಾಗಿರುವ, ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಮತ್ತೆ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರೆ, ಹತ್ತು ವರ್ಷಗಳ ನಂತರ ಮತ್ತೊಮ್ಮೆ ಡಿಎಂಕೆ ಯನ್ನು ಅಧಿಕಾರಕ್ಕೆ ತರಲು ಎಂ.ಕೆ. ಸ್ಟಾಲಿನ್ ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಮಕ್ಕಳ್ ನೀಧಿ ಮೈಯುಂ ಪಕ್ಷದ ನೇತಾರ ಕಮಲ ಹಾಸನ್ ಹಾಗೂ ಎಐಎಡಿಎಂಕೆಯ ಓ. ಪನ್ನೀರ ಸೆಲ್ವಂ ಕೂಡ ಈ ಚುನಾವಣೆ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಎಕ್ಸಿಟ್ ಪೋಲ್ ಹೇಳುವುದೇನು?
ಈ ಬಾರಿ ರಾಜ್ಯದಲ್ಲಿ ಎಐಎಡಿಎಂಕೆ ಆಳ್ವಿಕೆ ಕೊನೆಯಾಗಿ ಡಿಎಂಕೆ ಅಧಿಕಾರಕ್ಕೇರುವುದು ಖಚಿತ ಎನ್ನಲಾಗಿದೆ. ಈಟಿವಿ ಭಾರತ ಮತದಾನೋತ್ತರ ಸಮೀಕ್ಷೆಯ ಪ್ರಕಾರ, ಡಿಎಂಕೆ ಮೈತ್ರಿಕೂಟವು 133, ಎಐಎಡಿಎಂಕೆ 89 ಹಾಗೂ ಇತರರು 12 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ತಿಳಿದು ಬಂದಿದೆ.
ಪ್ರಮುಖ ರಾಷ್ಟ್ರೀಯ ಸುದ್ದಿ ವಾಹಿನಿಗಳಾದ ಟೈಮ್ಸ್ ನೌ-ಸಿ ವೋಟರ್, ಇಂಡಿಯಾ ಟುಡೇ-ಮೈ ಆಕ್ಸಿಸ್, ರಿಪಬ್ಲಿಕ್-ಸಿಎನ್ಎಕ್ಸ್ ಸಮೀಕ್ಷೆಗಳು ಸಹ ಡಿಎಂಕೆ ಅಧಿಕಾರಕ್ಕೆ ಬರುಲಿದೆ ಎಂದು ಅಂದಾಜಿಸಿವೆ.
ಕೇರಳ
140 ಸದಸ್ಯ ಬಲದ ಕೇರಳ ವಿಧಾನ ಸಭೆಗೆ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ.
ಪ್ರಮುಖ ಚುನಾವಣಾ ವಿಷಯಗಳು ಮತ್ತು ಮತದಾರರ ಒಲವು