ನವದೆಹಲಿ: 2008ರ ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದಲ್ಲಿ ಅಪರಾಧಿಯಾಗಿದ್ದ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ಸಹಚರ ಅರಿಜ್ ಖಾನ್ ಅಲಿಯಾಸ್ ಜುನೈದ್‌ಗೆ ದೆಹಲಿ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಈ ಎನ್‌ಕೌಂಟರ್‌ನಲ್ಲಿ ಪ್ರಾಣತ್ಯಾಗ ಮಾಡಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್ ಚಾಂದ್ ಶರ್ಮಾರ ಪತ್ನಿ ನ್ಯಾಯಾಲಯ ತೀರ್ಪು ತೃಪ್ತಿ ತಂದಿದೆ ಎಂದು ತಿಳಿಸಿದ್ದಾರೆ.
2008ರ ಸೆಪ್ಟೆಂಬರ್ 13ರಂದು ದೆಹಲಿಯಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟಗಳಲ್ಲಿ 39 ಮಂದಿ ಸಾವಿಗೀಡಾಗಿದ್ದರು. 159 ಮಂದಿ ಗಾಯಗೊಂಡಿದ್ದರು. ನಂತರ ಸೆಪ್ಟೆಂಬರ್ 19ರಂದು ದಕ್ಷಿಣ ದೆಹಲಿಯ ಜಮಿಯಾ ನಗರದಲ್ಲಿ ಪೊಲೀಸರು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಇನ್‌ಸ್ಪೆಕ್ಟರ್ ಚಾಂದ್ ಶರ್ಮಾ ಹುತಾತ್ಮರಾಗಿದ್ದರು.