ಬಟಿಂಡಾ (ಪಂಜಾಬ್): ದೀಪಾವಳಿ ಹಬ್ಬವನ್ನು ದೇಶಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಮನೆ ಮನೆಗಳಲ್ಲಿ ದೀಪ ಬೆಳಗಿ, ಪಟಾಕಿ ಸಿಡಿಸುವುದು ಸಂಪ್ರದಾಯ. ಆದರೆ ಪಂಜಾಬ್ನ ಬಟಿಂಡಾದ ಕೆಲವು ಗ್ರಾಮಗಳಲ್ಲಿ ದೀಪಾವಳಿ ಆಚರಿಸಿ ದಶಕಗಳೇ ಕಳೆದುಹೋಗಿವೆ.
ದೇಶಾದ್ಯಂತ ಎಲ್ಲರೂ ಸಂಭ್ರಮದಿಂದ ದೀಪಾವಳಿ ಆಚರಿಸಿದರೆ, ಬಟಿಂಡಾದ ಕೆಲವು ಗ್ರಾಮಗಳಲ್ಲಿ ದೀಪಾವಳಿಯನ್ನು ಆಚರಣೆಗೆ ನಿರ್ಬಂಧವಿದೆ. ಪಟಾಕಿ ಸಿಡಿಸುವುದಕ್ಕೂ ಜಿಲ್ಲಾಡಳಿತ ನಿಷೇಧ ಹೇರಿದೆ.
ಬಟಿಂಡಾದ ಫೂಸ್ ಮಂದಿ, ಭಾಗು, ಗುಲಾಬ್ಗಢ ಗ್ರಾಮಗಳಲ್ಲಿ ದೀಪಾವಳಿ ಆಚರಿಸಿ ಸಾಕಷ್ಟು ವರ್ಷಗಲೇ ಉರುಳಿಹೋಗಿವೆ. ಈ ಗ್ರಾಮಗಳ ಬಳಿ ಸೇನೆಯ ಕಂಟೋನ್ಮೆಂಟ್ ಪ್ರದೇಶ ಮತ್ತು ಮದ್ದು ಗುಂಡುಗಳ ಡಿಪೋ ಇರುವುದರಿಂದ ಜಿಲ್ಲಾಡಳಿತ ದೀಪಾವಳಿ ಆಚರಣೆ ನಿಷೇಧಿಸಿದೆ. ಇದರಿಂದಾಗಿ ಗ್ರಾಮಸ್ಥರು ಕಳೆದ 50 ವರ್ಷಗಳಿಂದ ಬೆಳಕಿನ ಹಬ್ಬ ಆಚರಿಸಿಯೇ ಇಲ್ಲ. ಅಲ್ಲದೆ ಯಾರಾದರೂ ಪಟಾಕಿ ಸಿಡಿಸಿದರೆ ಅಂಥವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳುತ್ತದೆ. ಪ್ರತಿ ವರ್ಷವೂ ದೀಪಾವಳಿ ಆಚರಿಸದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗುತ್ತದೆ.
ಮಕ್ಕಳು ದೀಪಾವಳಿ ಆಚರಣೆಗೆ ಮತ್ತು ಪಟಾಕಿ ಸಿಡಿಸಲು ಒತ್ತಾಯಿಸಿದರೆ ಅವರನ್ನು ಸಂಬಂಧಿಕರ ಮನೆಗೆ ಕಳುಹಿಸಲಾಗುತ್ತದೆ. ಈ ಮಿಲಿಟರಿ ಕಂಟೋನ್ಮೆಂಟ್ ಪ್ರದೇಶವನ್ನು ಬಟಿಂಡಾದಲ್ಲಿ 1976ರಲ್ಲಿ ನಿರ್ಮಿಸಲಾಯಿತು. ಈ ವೇಳೆ ಸುತ್ತಮುತ್ತಲಿನ ಗ್ರಾಮಗಳ ಪ್ರದೇಶವನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದರು.
ಮದ್ದುಗುಂಡುಗಳ ಸಂಗ್ರಹ: ಇಲ್ಲಿನ ಫೂಸ್ ಮಂಡಿ ಗ್ರಾಮದಲ್ಲಿ ಮದ್ದುಗುಂಡಗಳನ್ನು ಸಂಗ್ರಹಿಸಿ ಇಡಲಾಗಿದೆ. ಇಲ್ಲಿ ಕೆಲವೊಮ್ಮೆ ಅವಧಿ ಮೀರಿದ ಗುಂಡುಗಳನ್ನು ನಾಶಪಡಿಸಲಾಗುತ್ತದೆ. ಈ ಮದ್ದುಗುಂಡುಗಳು ಗ್ರಾಮಗಳಿಗೆ ಸಿಡಿಯುತ್ತದೆ. ಇದರಿಂದ ಗ್ರಾಮಸ್ಥರಿಗೆ ತೊಂದರೆ ಉಂಟಾಗುತ್ತದೆ. ಗ್ರಾಮಗಳಲ್ಲಿರುವ ಮನೆಗಳ ನಕ್ಷೆಯನ್ನು ಮಿಲಿಟರಿ ಹೊಂದಿದೆ. ಇಲ್ಲಿ ಹೊಸ ಮನೆಗಳ ನಿರ್ಮಾಣಕ್ಕೆ ಅವಕಾಶವೂ ಇಲ್ಲ.
ಇದು ಮಿಲಿಟರಿ ಕಂಟೋನ್ಮೆಂಟ್ ಪ್ರದೇಶ ಆಗಿರುವುದರಿಂದ ಇಲ್ಲಿನ ಜಾಗಗಳಿಗೆ ಬೆಲೆಯೂ ಇಲ್ಲ. ರಸ್ತೆ ಸಂಪರ್ಕ ಇಲ್ಲದಿರುವುದರಿಂದ ಗ್ರಾಮಸ್ಥರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಂಡು ದೀಪಾವಳಿ ಆಚರಣೆಗೆ ಅವಕಾಶ ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಇದರ ಜೊತೆಗೆ ದೇಶಾದ್ಯಂತ ದೀಪಾವಳಿ ಆಚರಿಸುವಂತೆ ಇಲ್ಲಿಯೂ ಆಚರಿಸಲು ಅವಕಾಶ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ ಝಿಕಾ ವೈರಸ್ ಪತ್ತೆ: ಗರ್ಭಿಣಿಯರ ಆರೋಗ್ಯದ ಮೇಲೆ ಹೆಚ್ಚು ನಿಗಾ