ಬರ್ನಾಲಾ (ಪಂಜಾಬ್):ರೆಸ್ಟೋರೆಂಟ್ ಬಿಲ್ ವಿಚಾರವಾಗಿ ನಡೆದ ಗಲಾಟೆ ಬಿಡಿಸಲು ಹೋದ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಕಬಡ್ಡಿ ಆಟಗಾರರನ್ನು ಪಂಜಾಬ್ನ ಬರ್ನಾಲಾ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಓರ್ವ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಸೆರೆಹಿಡಿಯಲಾಗಿದೆ. ಗಾಯಾಳುವನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬರ್ನಾಲಾ ನಗರದ ರೆಸ್ಟೋರೆಂಟ್ವೊಂದರಲ್ಲಿ ಭಾನುವಾರ ರಾತ್ರಿ ಬಿಲ್ ವಿಚಾರವಾಗಿ ಕಬಡ್ಡಿ ಆಟಗಾರರು ಹಾಗೂ ರೆಸ್ಟೋರೆಂಟ್ ಸಿಬ್ಬಂದಿ ನಡುವೆ ಜಗಳ ನಡೆದಿತ್ತು. ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಪೊಲೀಸರೊಂದಿಗೂ ಗಲಾಟೆ ಮಾಡಿದ್ದ ಆಟಗಾರರು, ಹೆಡ್ ಕಾನ್ಸ್ಟೆಬಲ್ ದರ್ಶನ್ ಸಿಂಗ್ ಎಂಬವರ ಮೇಲೆ ದಾಳಿ ಮಾಡಿದ್ದರು. ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದರು.
ಈ ಕೊಲೆಯಲ್ಲಿ ಭಾಗಿಯಾದ ಆರೋಪಿಗಳಾದ ನಾಲ್ವರು ಆಟಗಾರರನ್ನು ಒಂದೇ ದಿನದಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪರಮ್ಜೀತ್ ಸಿಂಗ್ ಪಮ್ಮ ಲಖಕ್ರಿವಾಲಾ, ಜುಗರಾಜ್ ಸಿಂಗ್, ಗುರುಮೀತ್ ಸಿಂಗ್ ಹಾಗೂ ವಜೀರ್ ಸಿಂಗ್ ಎಂಬವರು ಬಂಧಿತರಾಗಿದ್ದು, ಒಂದು ಪಿಸ್ತೂಲ್ ಹಾಗೂ ಎರಡು ಜೀವಂತ ಕ್ಯಾರ್ಟ್ರಿಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧನದ ವೇಳೆ ಎನ್ಕೌಂಟರ್:ಆರೋಪಿಗಳ ಬಂಧನಕ್ಕೆ ಪೊಲೀಸರು ತೆರಳಿದಾಗ ಗುಂಡಿನ ಚಕಮಕಿ ನಡೆದಿದೆ. ಪೊಲೀಸರ ಮೇಲೆಯೇ ಆರೋಪಿಗಳು ಗುಂಡು ಹಾರಿಸಲು ಮುಂದಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡಿನ ದಾಳಿ ಮಾಡಿದ್ದಾರೆ. ಇದರಿಂದ ಅಂತರರಾಷ್ಟ್ರಿಯ ಕಬಡ್ಡಿ ಆಟಗಾರ ಪರಮ್ಜೀತ್ ಸಿಂಗ್ ಕಾಲಿಗೆ ಗುಂಡೇಟು ಬಿದ್ದಿದೆ. ಸದ್ಯ ಈತನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.