ಮುಂಬೈ :ಸುಮಾರು ಒಂದು ವಾರದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಬಳಿಕ ಬಾರ್ಜ್ P-305 ದುರಂತದಲ್ಲಿ ನಾಪತ್ತೆಯಾದವರ ಎಲ್ಲರ ಮೃತದೇಹಗಳು ಪತ್ತೆಯಾಗಿವೆ. ನೌಕಾ ದುರಂತದಲ್ಲಿ ಒಟ್ಟು 86 ಮಂದಿ ಸಾವನ್ನಪ್ಪಿದ್ದು, 188 ಜನರನ್ನು ರಕ್ಷಿಸಲಾಗಿದೆ.
ಮೇ 17ರಂದು ತೌಕ್ತೆ ಚಂಡಮಾರುತದ ಆರ್ಭಟದಿಂದಾಗಿ ಮುಂಬೈ ತಟದ ಅರಬ್ಬೀ ಸಮುದ್ರದಲ್ಲಿ P-305 ಬೋಟ್ ಕೊಚ್ಚಿ ಹೋಗಿತ್ತು. ಸಿಬ್ಬಂದಿಯೂ ಸೇರಿದಂತೆ ನೌಕೆಯಲ್ಲಿ 274 ಜನರಿದ್ದರು. ಸತತ ಆರು ದಿನಗಳ ಕಾಲ ನೌಕಾಪಡೆ ಹಾಗೂ ವಾಯುಪಡೆ ರಕ್ಷಣಾ-ಶೋಧ ಕಾರ್ಯಾಚರಣೆ ನಡೆಸಿತ್ತು.
ಸಮುದ್ರದಲ್ಲಿ ಸಿಲುಕಿದ್ದ 188 ಮಂದಿಯನ್ನು ರಕ್ಷಿಸಲಾಗಿತ್ತು ಹಾಗೂ 70 ಶವಗಳನ್ನು ಹೊರ ತೆಗೆಯಲಾಗಿತ್ತು. ಮಹಾರಾಷ್ಟ್ರದ ರಾಯಗಢ್ ಜಿಲ್ಲೆಯ ಕರಾವಳಿ ತೀರಗಳಲ್ಲಿ ಹಾಗೂ ಗುಜರಾತ್ನ ವಲ್ಸಾದ್ ಕಡಲ ತೀರದಲ್ಲಿ ತಲಾ 8 ಶವಗಳು ಸಿಕ್ಕಿದ್ದವು. ಹೀಗಾಗಿ, ಎಲ್ಲಾ 274 ಮಂದಿಯ ಲೆಕ್ಕ ಸಿಕ್ಕಿದಂತಾಗಿದೆ.
ಇದನ್ನೂ ಓದಿ: ನೌಕಾ ದುರಂತ: ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಒಎನ್‌ಜಿಸಿ, ಅಫ್ಕಾನ್