ಬರೇಲಿ, ಉತ್ತರಪ್ರದೇಶ:ಸ್ನೇಹಿತರಿಬ್ಬರ ನಡುವೆ ಅಗಾಧ ಪ್ರೇಮ ಬೆಳೆದಿತ್ತು. ಇಬ್ಬರೂ ಒಟ್ಟಿಗೆ ಬದುಕುತ್ತೇನೆ, ಸಾಯುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಲೇ ಮದುವೆಗೆ ಸಿದ್ಧರಾಗಿದ್ದರು. ಇಷ್ಟೇ ಅಲ್ಲ ಯುವತಿಯೊಬ್ಬಳು ಮದುವೆಗಾಗಿ ತನ್ನ ಲಿಂಗವನ್ನೇ ಬದಲಿಸಿಕೊಂಡಿದ್ದಳು. ಬಳಿಕ ಎಸ್‌ಡಿಎಂ ನ್ಯಾಯಾಲಯದಲ್ಲಿ ಮದುವೆ ನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರದಲ್ಲಿ ಎಸ್‌ಡಿಎಂ ನ್ಯಾಯಾಲಯ ಸರ್ಕಾರಿ ವಕೀಲರಿಂದ ಅಭಿಪ್ರಾಯ ಕೇಳಿದೆ.
ಬರೇಲಿಯಲ್ಲಿ ಖಾಸಗಿ ಉದ್ಯೋಗ ಮಾಡುತ್ತಿದ್ದ ಇಬ್ಬರು ಯುವತಿಯರ ಸ್ನೇಹ ಪ್ರೀತಿಗೆ ತಿರುಗಿದೆ. ನಂತರ ಇಬ್ಬರೂ ಪತಿ-ಪತ್ನಿಯಾಗಿ ಜೀವನ ನಡೆಸಲು ನಿರ್ಧರಿಸಿದ್ದಾರೆ. ಒಬ್ಬ ಹುಡುಗಿ ಬದೌನ್ ನಿವಾಸಿ ಮತ್ತು ಇನ್ನೊಬ್ಬಳು ಬರೇಲಿ ನಿವಾಸಿ ಎಂದು ಹೇಳಲಾಗುತ್ತಿದೆ.
ಬದೌನ್‌ನ ಹುಡುಗಿ ಬರೇಲಿಯ ಹುಡುಗಿಯನ್ನು ಭೇಟಿಯಾಗಿದ್ದಾರೆ. ಮೊದಲಿಗೆ ಇವರಿಬ್ಬರ ಭೇಟಿ ಸ್ನೇಹವಾಗಿ ಮಾರ್ಪಟ್ಟಿತ್ತು. ಬಳಿಕ ಈ ಗೆಳೆತನ ಕ್ರಮೇಣವಾಗಿ ಪ್ರೀತಿಯ ಮಟ್ಟಕ್ಕೆ ತಲುಪಿತು. ಇಬ್ಬರೂ ಪತಿ-ಪತ್ನಿಯಾಗಿ ಬಾಳಲು ನಿರ್ಧರಿಸಿದರು. ಸ್ನೇಹಿತರಿಬ್ಬರ ಪ್ರೀತಿ ಎಷ್ಟಿತ್ತೆಂದರೆ ಮನೆಯವರ ವಿರೋಧದ ನಡುವೆಯೂ ಪತಿ - ಪತ್ನಿಯಾಗಿ ಜೀವನ ನಡೆಸಲು ಇವರಿಬ್ಬರೂ ಮದುವೆಗೆ ಒಪ್ಪಿಗೆ ಸೂಚಿಸಿದ್ದರು.
ಅವಳಲ್ಲ ಅವನಾದ ಯುವತಿ: ವೈದ್ಯಕೀಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಇಬ್ಬರು ಹುಡುಗಿಯರಲ್ಲಿ ಒಬ್ಬಳು ತನ್ನ ಲಿಂಗವನ್ನು ಬದಲಾಯಿಸಿದ್ದಾಳೆ ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ಇಬ್ಬರೂ ಎಸ್ ಡಿಎಂ ಸದರ್ ನ್ಯಾಯಾಲಯದಲ್ಲಿ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿದ್ದರು. ಮದುವೆ ನೋಂದಣಿಗೆ ಅರ್ಜಿಯನ್ನು ಸ್ವೀಕರಿಸಿದ ನಂತರ, ಎಸ್‌ಡಿಎಂ ನ್ಯಾಯಾಲಯದ ನ್ಯಾಯಮೂರ್ತಿ ಪ್ರತ್ಯೂಷ್ ಪಾಂಡೆ ಈ ವಿಷಯದಲ್ಲಿ ಸರ್ಕಾರಿ ವಕೀಲರಿಂದ ಕಾನೂನು ಅಭಿಪ್ರಾಯವನ್ನು ಕೇಳಿದ್ದಾರೆ.