ಗಯಾ (ಬಿಹಾರ) : ಬಿಹಾರದ ಬಾರಾ ಹತ್ಯಾಕಾಂಡದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ನಕ್ಸಲೇಟ್ ರಾಮಚಂದ್ರ ಯಾದವ್ ಅಲಿಯಾಸ್ ಕಿರಾನಿ ಯಾದವ್‌ಗೆ ಗಯಾ ಸಿವಿಲ್ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಸುದೀರ್ಘ ಮೂರು ದಶಕಗಳ ಕಾಲ ನಡೆದ ವಿಚಾರಣೆ ಬಳಿಕ ನ್ಯಾಯಾಲಯವು ಇಂದು ಆರೋಪಿಗೆ ಶಿಕ್ಷೆ ಪ್ರಕಟಿಸಿದೆ.
1992ರ ಫೆ.12ರಂದು ಗಯಾ ಬಳಿಯ ಬಾರಾ ಗ್ರಾಮದಲ್ಲಿ ನಡೆದಿದ್ದ ಹತ್ಯಾಕಾಂಡದಲ್ಲಿ ಕಿರಾನಿ ಯಾದವ್ ಸುಮಾರು 35 ಮಂದಿಯನ್ನು ಕೊಂದ ಆರೋಪ ಹೊತ್ತಿದ್ದರು. ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯವು ಫೆ.26ರಂದು ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಕಿರಾನಿ ಯಾದವ್ನನ್ನು ದೋಷಿ ಎಂದು ಹೇಳಿತ್ತು. ಬಳಿಕ ತೀರ್ಪನ್ನು ಮಾ.2ಕ್ಕೆ ಕಾಯ್ದಿರಿಸಿದ್ದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಇಂದು ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 3 ಲಕ್ಷದ 5 ಸಾವಿರ ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ.
ಪ್ರಾಸಿಕ್ಯೂಷನ್ ಪರ ವಕೀಲ ಪ್ರಭಾತ್ ಕುಮಾರ್ ವಾದ ಮಂಡಿಸಿದ್ದರು. ಅಲ್ಲದೇ ಆರೋಪಿಗಳ ಪರವಾಗಿ ವಕೀಲರಾದ ತಾರಿಕ್ ಅಲಿ ಮತ್ತು ಸುರೇಂದ್ರ ನಾರಾಯಣ್ ವಾದ ಮಂಡಿಸಿದರು. ಇನ್ನು ವಾದ - ಪ್ರತಿವಾದವನ್ನು ಆಲಿಸಿದ ಗಯಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮನೋಜ್ ಕುಮಾರ್ ತಿವಾರಿ ಈ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ತೀರ್ಪಿನ ವಿರುದ್ಧ ಸುಪ್ರೀಕೋರ್ಟ್ಗೆ ಹೋಗುವುದಾಗಿ ಆರೋಪಿ ಪರ ವಕೀಲರು ಹೇಳಿದ್ದಾರೆ.