ಬಂಕುರಾ(ಪಶ್ಚಿಮಬಂಗಾಳ) :ಈ ಶಾಲೆಯಲ್ಲಿ ಇರೋದು ಒಬ್ಬರೇ ಒಬ್ಬ ಶಿಕ್ಷಕರು. ಅದು ಅತಿಥಿ ಶಿಕ್ಷಕಿ. 5 ರಿಂದ 8 ನೇ ತರಗತಿವರೆಗೆ 32 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ದುರಾದೃಷ್ಟವಶಾತ್ ಇರುವ ಒಬ್ಬ ಶಿಕ್ಷಕಿಗೆ ಅನಾರೋಗ್ಯ ಉಂಟಾಗಿ ಬರೋಬ್ಬರಿ 8 ತಿಂಗಳಿಂದ ಹಾಸಿಗೆ ಹಿಡಿದಿದ್ದಾರೆ. ಅವತ್ತಿನಿಂದ ಹಿಡಿದು ಇಂದಿನವರೆಗೂ ಮಕ್ಕಳಿಗೆ ಓದು, ಬರಹ, ಶಾಲೆ ಎಲ್ಲವೂ ಬಂದ್ ಆಗಿವೆ. ಹೋಗ್ಲಿ ಬೇರೆ ಕಡೆ ಶಾಲೆಗೆ ಹೋಗೋಣ ಅಂದ್ರೂ ವ್ಯವಸ್ಥೆಗಳ ಕೊರತೆ. ಹೀಗಾಗಿ ಈ ಗ್ರಾಮದ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿ ಉಳಿದಿದೆ.
ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಡಳಿತ ನಡೆಸುತ್ತಿರುವ ಪಶ್ಚಿಮಬಂಗಾಳದ ಬಂಕುರಾ ಜಿಲ್ಲೆಯ ಸತ್ಮೌಲಿ ಚಾಂದಬಿಲಾ ಗ್ರಾಮದ ಜೂನಿಯರ್ ಹೈಸ್ಕೂಲ್‌ನಲ್ಲಿ. 8 ತಿಂಗಳಿನಿಂದ ಶಾಲೆ ಮುಚ್ಚಿದ್ದರೂ ಶಿಕ್ಷಣ ಇಲಾಖೆ, ಅದರ ಅಧಿಕಾರಿಗಳು ಮತ್ತು ಸರ್ಕಾರದ ಕಿವಿಗೆ ಬಿದ್ದರೂ ಘನ ನಿರ್ಲಕ್ಷ್ಯ ವಹಿಸಲಾಗಿದೆ.
ಶಾಲೆಗೆ ಅಘೋಷಿತ ಬೀಗಮುದ್ರೆ:ಸರ್ಕಾರಿ ಶಾಲೆಯಾಗಿದ್ದರೂ ಇಲ್ಲಿ ಒಬ್ಬ ಶಿಕ್ಷಕರನ್ನು ನೇಮಕ ಮಾಡಲಾಗಿಲ್ಲ. ಇರುವ ಅತಿಥಿ ಶಿಕ್ಷಕಿಯೇ ಇಲ್ಲಿಯವರೆಗೂ ಎಲ್ಲವನ್ನೂ ನಿಭಾಯಿಸಿಕೊಂಡು ಬಂದಿದ್ದರು. ಕಳೆದ 7-8 ತಿಂಗಳ ಹಿಂದೆ ಅವರು ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದಾರೆ. ಅಂದಿನಿಂದ ಶಾಲೆಗೆ ಬೀಗ ಹಾಕಲಾಗಿದೆ. ಮಕ್ಕಳ ಅಧ್ಯಯನ, ಪರೀಕ್ಷೆ, ಪಾಠಗಳು ಎಲ್ಲವಕ್ಕೂ ಅಘೋಷಿತ ಬೀಗ ಬಿದ್ದಿದೆ. ಪೋಷಕರು ಮತ್ತು ಸ್ಥಳೀಯರು ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರೂ ಯಾವುದೇ ಪ್ರಗತಿ ಕಂಡಿಲ್ಲ ಎಂಬುದು ಅಚ್ಚರಿಯ ಸಂಗತಿ.