ಪ್ರಯಾಗರಾಜ್ (ಉತ್ತರ ಪ್ರದೇಶ): ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಹರಿಯುವ ಗಂಗಾ ನದಿಯಲ್ಲಿ ಡಜನ್ಗಟ್ಟಲೆ ಶವಗಳು ತೇಲಿ ಬಂದ ಬೆನ್ನಲ್ಲೆ ಇದೀಗ ಮತ್ತೊಮ್ಮೆ ಅದೇ ನದಿ ತಟದಲ್ಲಿ ನೂರಾರು ಸಮಾಧಿಗಳಿರುವುದು ಕಂಡು ಬಂದಿದೆ.
ಪ್ರಯಾಗರಾಜ್ ಜಿಲ್ಲೆಯ ನೈನಿ ಪ್ರದೇಶದ ದೇವರಾಖ್ ಘಾಟ್‌ನಲ್ಲಿ ಈ ಸಮಾಧಿಗಳಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕೊಳೆತ ಶವಗಳಿಂದ ಹೊರ ಸೂಸುವ ದುರ್ವಾಸನೆಯಿಂದಾಗಿ ಭಕ್ತರು ಈ ಪ್ರದೇಶದಲ್ಲಿ ಪವಿತ್ರ ಸ್ನಾನ ಮಾಡುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಲಾಗ್ತಿದೆ.
ಡ್ರೋನ್ ಕ್ಯಾಮೆರಾದ ಕಣ್ಣಲ್ಲಿ ಸೆರೆಯಾದ ಸಮಾಧಿಗಳು ಸ್ಮಶಾನಗಳಲ್ಲಿ ಸ್ಥಳಾವಕಾಶದ ಕೊರತೆ ಮತ್ತು ಅಂತ್ಯಕ್ರಿಯೆ ನಡೆಸಲು ದುಡ್ಡಿಲ್ಲದ ಕಾರಣ ಈ ರೀತಿ ನದಿ ತಟದಲ್ಲಿ ಶವಗಳನ್ನು ಹೂಳಿರಬಹುದು ಎಂದು ಶಂಕಿಸಲಾಗಿದೆ. ನಗರದ ಶೃಂಗರ್‌ಪುರ ಘಾಟ್ನಲ್ಲೂ ಇದೇ ರೀತಿ ಸಮಾಧಿಗಳಿರುವ ಬಗ್ಗೆ ಮಾಹಿತಿ ದೊರೆತಿದೆ.
'ಈ ಮೊದಲು ಇಷ್ಟೊಂದು ಹೆಣಗಳನ್ನು ಸಮಾಧಿ ಮಾಡಿರುವುದನ್ನು ನಾವೆಲ್ಲೂ ನೋಡಿಯೇ ಇಲ್ಲ. ಕೆಲವೇ ಕೆಲವು ಶವಗಳನ್ನು ಇಲ್ಲಿಗೆ ಅಂತ್ಯ ಸಂಸ್ಕರಕ್ಕಾಗಿ ತರಲಾಗ್ತಿತ್ತು. ಬಡತನ ಮತ್ತು ಸಾಂಕ್ರಾಮಿಕ ರೋಗ ಜನರನ್ನು ವೇಗವಾಗಿ ಕೊಲ್ಲುತ್ತಿದೆ' ಎಂದು ಸ್ಥಳೀಯರೊಬ್ಬರು ಹೇಳಿದರು.
ಇದನ್ನೂಓದಿ: ರಾಯಗಢ ಕಡಲ ತೀರದಲ್ಲಿ 8 ಮೃತದೇಹಗಳು ಪತ್ತೆ: ಬಾರ್ಜ್ ದುರಂತದಲ್ಲಿ ನಾಪತ್ತೆಯಾದವರ ಶವ ಶಂಕೆ
ವೇಗವಾಗಿ ಬೀಸುವ ಗಾಳಿಗೆ ಸಮಾಧಿ ಮೇಲಿನ ಮರಳು ಸರಿದಾಗ ಹೆಣಗಳು ಹೊರಗೆ ಕಾಣುತ್ತಿದ್ದು ನಾಯಿ, ಪಕ್ಷಿಗಳು ಅವುಗಳನ್ನು ಹಿಡಿದೆಳೆಯುತ್ತಿವೆ. ಈ ಸಮಾಧಿಗಳು ಕೋವಿಡ್ನಿಂದ ಮೃತರಾದವರದ್ದಾ? ಎಂಬುದು ಖಚಿತವಾಗಿಲ್ಲ. ಸ್ಥಳೀಯರ ಪ್ರಕಾರ, ಕೋವಿಡ್ 2ನೇ ಅಲೆ ಪ್ರಾರಂಭವಾದ ಬಳಿಕ, ಇಲ್ಲಿ ಈ ರೀತಿಯ ಸಮಾಧಿಗಳು ಕಾಣತೊಡಗಿವೆ. ನದಿ ತೀರದಲ್ಲಿ ಸಮಾಧಿಗಳು ಪತ್ತೆಯಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಪ್ರಯಾಗ್ ರಾಜ್ ಜಿಲ್ಲಾಡಳಿತ ಆ ಪ್ರದೇಶದ ಮೇಲೆ ನಿಗಾ ಇಟ್ಟಿದೆ.
ಯುಪಿಯಲ್ಲಿ ಕೋವಿಡ್ ಅಬ್ಬರ ಹೇಗಿದೆ?
ಉತ್ತರ ಪ್ರದೇಶದಲ್ಲಿ ಪ್ರಸ್ತುತ 1,93,815 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇದುವರೆಗೆ ಒಟ್ಟು 13,85,855 ರೋಗಿಗಳು ಚೇತರಿಸಿಕೊಂಡಿದ್ದಾರೆ. ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ಇದುವರೆಗೆ 16,957 ಜನರು ಮರಣ ಹೊಂದಿದ್ದಾರೆ.
ಪ್ರಯಾಗ್‌ರಾಜ್ ಜಿಲ್ಲಾಡಳಿತದ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಶನಿವಾರ 165 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 521 ಜನರು ಗುಣಮುಖರಾಗಿದ್ದಾರೆ. ಒಂಬತ್ತು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.