ಪಾಟ್ನಾ (ಬಿಹಾರ):ಕರ್ನಾಟಕದಲ್ಲಿನ ಹಿಜಾಬ್ ಸದ್ದು ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಬುರ್ಖಾಧಾರಿ ಯುವತಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ವಹಿವಾಟು ನಡೆಸದಂತೆ ತಡೆಯಲಾಗಿದೆ ಎಂದು ಹೇಳಲಾಗಿದೆ.
ಆ ಹುಡುಗಿ ಘಟನೆಯನ್ನು ರೆಕಾರ್ಡ್ ಮಾಡಿ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾಳೆ. ಶನಿವಾರ ಈ ಘಟನೆ ನಡೆದಿದ್ದು, ಬಾಲಕಿ ಹಣ ಡ್ರಾ ಮಾಡಲು ಬೇಗುಸರಾಯ್‌ನಲ್ಲಿರುವ ಮನ್ಸೂರ್ ಚೌಕ್‌ನ ಯುಕೊ ಬ್ಯಾಂಕ್‌ಗೆ ತೆರಳಿದ್ದಳು.
ವಿಡಿಯೋದಲ್ಲಿ ಇರುವಂತೆ, ಮೂರ್ನಾಲ್ಕು ಬ್ಯಾಂಕ್ ಉದ್ಯೋಗಿಗಳು ಹಿಜಾಬ್ ಅನ್ನು ತೆಗೆದು ಹಾಕುವಂತೆ ಹೇಳಿದ್ದಾರೆ. ಇದಕ್ಕೆ ಬಾಲಕಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪೋಷಕರಿಗೆ ಕರೆ ಮಾಡಿದ್ದಾಳೆ. ಬ್ಯಾಂಕಿನೊಳಗೆ ಹಿಜಾಬ್ ಅನ್ನು ಅನುಮತಿಸಲಾಗುವುದಿಲ್ಲ ಎಂಬ ಲಿಖಿತ ಸೂಚನೆ ತೋರಿಸಿ ಎಂದು ಅವರು ಉದ್ಯೋಗಿಗಳನ್ನು ಕೇಳಿದ್ದಾರೆ.
ನಾನು ಮತ್ತು ನನ್ನ ಮಗಳು ಪ್ರತಿ ತಿಂಗಳು ಬ್ಯಾಂಕ್‌ಗೆ ಬರುತ್ತಿದ್ದೆವು. ಆದರೆ, ಹಿಂದೆ ಯಾರೂ ಆಕ್ಷೇಪಿಸಿರಲಿಲ್ಲ. ಈಗ ಏಕೆ ಮಾಡುತ್ತಿದ್ದಾರೆ? ಬ್ಯಾಂಕಿಂಗ್ ಕಾರ್ಯಾಚರಣೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸುವ ಕುರಿತು ಅವರು ಯಾವುದಾದರೂ ಲಿಖಿತ ಅಧಿಸೂಚನೆಯನ್ನು ಹೊಂದಿದ್ದಾರೆಯೇ? ಎಂದು ಆಕೆಯ ತಂದೆ ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ.
ಈ ವೇಳೆ ಮಹಿಳೆ ಮತ್ತು ಆಕೆಯ ಕುಟುಂಬದವರು ವಿಡಿಯೋ ರೆಕಾರ್ಡ್ ಮಾಡುತ್ತಿದ್ದನ್ನು ನಿಲ್ಲಿಸುವಂತೆ ಉದ್ಯೋಗಿಗಳು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ:ಜಮೀನು ವಿವಾದದಿಂದ ರೈತ ಆತ್ಮಹತ್ಯೆ: ಮೂರು ದಿನದಿಂದ ಮರದಲ್ಲೇ ನೇತಾಡುತ್ತಿದೆ ದೇಹ
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಮರು ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಟ್ಯಾಗ್ ಮಾಡಿರುವ ಅವರು, ನಿಮ್ಮ ಸ್ಥಾನವನ್ನು ನೀವು ಎಷ್ಟರಮಟ್ಟಿಗೆ ಭದ್ರಪಡಿಸಿಕೊಳ್ಳಲು ಹೋಗುತ್ತಿದ್ದೀರಿ?.
ನೀವು ನಿಮ್ಮ ಸಿದ್ಧಾಂತ, ನೀತಿಗಳು, ನೈತಿಕ ಹೊಣೆಗಾರಿಕೆ ಮತ್ತು ಆತ್ಮಸಾಕ್ಷಿಯನ್ನು ಬಿಜೆಪಿಯ ಮುಂದೆ ಅಡಮಾನವಿಟ್ಟಿದ್ದೀರಿ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ, ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೀರಿ. ದೇಶ ಹಾಗೂ ಕನಿಷ್ಠ ಸಂವಿಧಾನವನ್ನು ಗೌರವಿಸಿ ಮತ್ತು ಆಪಾದಿತ ನೌಕರರನ್ನು ಬಂಧಿಸಿ ಎಂದು ಆಗ್ರಹ ಮಾಡಿದ್ದಾರೆ.
ಇದರ ನಡುವೆ UCO ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಈ ಘಟನೆಯ ಕುರಿತು ಹೇಳಿಕೆಯನ್ನು ನೀಡಿದೆ, ಬ್ಯಾಂಕ್ ನಾಗರಿಕರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತದೆ ಮತ್ತು ತನ್ನ ಗೌರವಾನ್ವಿತ ಗ್ರಾಹಕರನ್ನು ಜಾತಿ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ. ಬ್ಯಾಂಕ್ ಈ ವಿಷಯದ ಬಗ್ಗೆ ಸತ್ಯವನ್ನು ಪರಿಶೀಲಿಸುತ್ತಿದೆ ಎಂದಿದೆ.