ಹೈದರಾಬಾದ್ : ಮುಂಬೈನ ಜುಹು ಪ್ರದೇಶದಲ್ಲಿರುವ ನಟ ಮತ್ತು ಬಿಜೆಪಿ ಸಂಸದ ಸನ್ನಿ ಡಿಯೋಲ್ ಒಡೆತನದ ಬಂಗಲೆಗೆ ಸಂಬಂಧಿಸಿದ ಹರಾಜು ನೋಟಿಸ್ ಅನ್ನು ಹಿಂಪಡೆಯಲಾಗಿದೆ ಎಂದು ಇಂದು ಬ್ಯಾಂಕ್ ಆಫ್ ಬರೋಡಾ ಪ್ರಕಟಣೆ ಹೊರಡಿಸಿದೆ. ಇ-ಹರಾಜು ಮೂಲಕ ಗದರ್ 2 ನಟನ ಆಸ್ತಿಯನ್ನು ಆಗಸ್ಟ್ 25 ರಂದು ಮಾರಾಟ ಮಾಡಿ ಬಾಕಿ ಇರುವ 56 ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳಲಾಗುವುದು ಎಂದು ನಿನ್ನೆ (ಭಾನುವಾರ) ತಿಳಿಸಿತ್ತು.
ಸನ್ನಿ ಡಿಯೋಲ್ ಎಂಬ ಹೆಸರಿನಿಂದ ಕರೆಯಲ್ಪಡುವ ಶ್ರೀ ಅಜಯ್ ಸಿಂಗ್ ಡಿಯೋಲ್ ಅವರಿಗೆ ಸಂಬಂಧಿಸಿದ ಹರಾಜು ನೋಟಿಸ್ ಅನ್ನು ತಾಂತ್ರಿಕ ಕಾರಣಗಳಿಂದಾಗಿ ಹಿಂತೆಗೆದುಕೊಳ್ಳಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿಕೆಯಲ್ಲಿ ವಿವರಿಸಿದೆ. ಸನ್ನಿಯ ಬಂಗಲೆ, ಸನ್ನಿ ವಿಲ್ಲಾ ಹೊರತಾಗಿ ಅದರ ಸುತ್ತ ಇರುವ 599.44 ಚದರ ಮೀಟರ್ ಪ್ರದೇಶ ಮತ್ತು ನಟನ ಕುಟುಂಬದ ಒಡೆತನದಲ್ಲಿರುವ ಸನ್ನಿ ಸೌಂಡ್ಸ್ ಕಂಪನಿಯನ್ನು ಹರಾಜು ಹಾಕಲಾಗುವುದು. ಜುಹು ಆಸ್ತಿಯ ಹರಾಜು 51.43 ಕೋಟಿ ರೂಪಾಯಿಗಳಿಗೆ ಪ್ರಾರಂಭವಾಗುವ ನಿರೀಕ್ಷೆಯಿದೆ, ಕನಿಷ್ಠ ಬಿಡ್ಡಿಂಗ್ ಮೊತ್ತವನ್ನು 5.14 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ ಎಂದು ನಿನ್ನೆ ಬ್ಯಾಂಕ್ ಹೇಳಿತ್ತು. ಇದೀಗ ಹರಾಜಿಗೂ ಮುನ್ನವೇ ಬ್ಯಾಂಕ್ ನೋಟಿಸ್ ಹಿಂಪಡೆದಿದ್ದು, ನಟನಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಸಾಲಕ್ಕೆ ಸನ್ನಿ ಡಿಯೋಲ್ ತಂದೆ ಧರ್ಮೇಂದ್ರ ವೈಯಕ್ತಿಕ ಗ್ಯಾರಂಟಿ ನೀಡಿದ್ದರು.