ಪಾಟ್ನಾ (ಬಿಹಾರ) :ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್‌ಗೆ 3 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು 3 ಕೋಟಿ ರೂ. ಮೌಲ್ಯದ ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್ನಿಂದ ಸಾಲ ಪಡೆದು ವಂಚಿಸಿದ್ದಾರೆ. ಈ ಬಗ್ಗೆ ಬ್ಯಾಂಕ್ನ ವ್ಯವಸ್ಥಾಪಕ ಪರಿಶೀಲನೆ ನಡೆಸಿದಾಗ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ.
ದುಷ್ಕರ್ಮಿಗಳು ಇಲ್ಲಿನ ಭಕ್ತಿಯಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬ್ಯಾಂಕ್ವೊಂದರಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು 3 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದರು. ಸಾಲದ ಅವಧಿ ಬಳಿಕ ಬ್ಯಾಂಕ್ ಮ್ಯಾನೇಜರ್ ಸಾಲ ಪಡೆದ ವ್ಯಕ್ತಿಗೆ ಕರೆ ಮಾಡಿ ಚಿನ್ನಾಭರಣ ಪಡೆಯುವಂತೆ ಹೇಳಿದ್ದಾರೆ. ಆದರೆ, ವ್ಯಕ್ತಿಯು ಈ ವೇಳೆ ಬೇರೆ ಬೇರೆ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಇದರಿಂದ ಅನುಮಾನಗೊಂಡ ಬ್ಯಾಂಕ್ ಮ್ಯಾನೇಜರ್ ಮತ್ತೊಬ್ಬನಿಂದ ಚಿನ್ನಾಭರಣವನ್ನು ಮೌಲ್ಯಮಾಪನ ಮಾಡಿದಾಗ ವಂಚನೆ ಬೆಳಕಿಗೆ ಬಂದಿದೆ.
ಆರೋಪಿಗಳು ಕಡಿಮೆ ಕ್ಯಾರೆಟ್ನ ಚಿನ್ನವನ್ನು ಬ್ಯಾಂಕ್‌ಗೆ ನೀಡಿ ಸಾಲ ಪಡೆದಿರುವುದು ಕಂಡು ಬಂದಿದೆ. ಈ ಸಂಬಂಧ ಬ್ಯಾಂಕ್ ವ್ಯವಸ್ಥಾಪಕರು 82 ಮಂದಿ ಗ್ರಾಹಕರು ಹಾಗೂ ಚಿನ್ನ ಮೌಲ್ಯಮಾಪನ ಮಾಡುವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಣಿಪುರದಲ್ಲಿ ಬ್ಯಾಂಕ್ ದರೋಡೆ :ಮುಸುಕುಧಾರಿ ದರೋಡೆಕೋರರ ಗುಂಪೊಂದು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ನುಗ್ಗಿ ಹಣ ದೋಚಿ ಪರಾರಿಯಾಗಿದ್ದ ಘಟನೆ ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿತ್ತು. ಮುಖವಾಡ ಧರಿಸಿದ್ದ ದುಷ್ಕರ್ಮಿಗಳು ಶಸ್ತ್ರಸಜ್ಜಿತವಾಗಿ ಬ್ಯಾಂಕ್‌ಗೆ ನುಗ್ಗಿ ಬರೋಬ್ಬರಿ 18.85 ಕೋಟಿ ರೂಪಾಯಿ ಲೂಟಿ ಮಾಡಿ ಪರಾರಿಯಾಗಿದ್ದರು ಎಂದು ವರದಿಯಾಗಿತ್ತು. ಬ್ಯಾಂಕ್ ಹೊರಗಡೆ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ದರೋಡೆಕೋರರ ಗುಂಪು ಬ್ಯಾಂಕ್ ಒಳಗೆ ಪ್ರವೇಶಿಸುತ್ತಿರುವ ವಿಡಿಯೋ ಸೆರೆಯಾಗಿತ್ತು.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ 10 ಜನರ ಅಪರಿಚಿತ ಮುಸುಕುಧಾರಿಗಳ ಗುಂಪು ಸಂಜೆ 5.40ರ ಸುಮಾರಿಗೆ ಉಖ್ರುಲ್‌ನ ವ್ಯೂಲ್ಯಾಂಡ್ ಪ್ರದೇಶದಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ನುಗ್ಗಿದ್ದರು. ಮುಖಕ್ಕೆ ಮಾಸ್ಕ್ ಧರಿಸಿದ್ದ ದುಷ್ಕರ್ಮಿಗಳು ಬೇರೆ ಭಾಷೆಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ, ಕೆಲ ದುಷ್ಕರ್ಮಿಗಳ ಏಕಾಏಕಿ ತಮ್ಮ ಬಳಿಯಿದ್ದ ಬಂದೂಕುಗಳನ್ನು ತೋರಿಸಿ ನೌಕರರನ್ನು ಎಲ್ಲಿಯೂ ಕದಲದಂತೆ ತಡೆದಿದ್ದರು. ಉಳಿದ ದರೋಡೆಕೋರರು ನಗದು ಸಂಗ್ರಹಿಸುತ್ತಿದ್ದರು ಎಂದು ಬ್ಯಾಂಕ್ ಸಿಬ್ಬಂದಿ ಮಾಹಿತಿ ನೀಡಿದ್ದರು.
ದರೋಡೆ ನಡೆದ ವೇಳೆ ಬ್ಯಾಂಕ್‌ನಲ್ಲಿ ನೌಕರರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಸಂಜೆ 4 ಗಂಟೆಗೆ ಬ್ಯಾಂಕ್ ವ್ಯವಹಾರಗಳು ಮುಕ್ತಾಯಗೊಳ್ಳುವ ಕಾರಣ ಗ್ರಾಹಕರೂ ಇರಲಿಲ್ಲ. ಮ್ಯಾನೇಜರ್ ಕೂಡ ರಜೆಯಲ್ಲಿದ್ದರು. ಬ್ಯಾಂಕ್ ಆವರಣದಲ್ಲಿ ಆರಂಭದಲ್ಲಿ ಏಳು ಮಂದಿ ಭದ್ರತಾ ಸಿಬ್ಬಂದಿಗಳಿದ್ದರೂ, ಘಟನೆ ಸಂಭವಿಸಿದಾಗ ಮುಖ್ಯ ಗೇಟ್‌ನಲ್ಲಿ ಒಬ್ಬರೇ ಸಿಬ್ಬಂದಿ ಇದ್ದು, ಇತರರು ಚಹಾ ಸೇವಿಸಲು ತೆರಳಿದ್ದರು. ಈ ವೇಳೆ ದರೋಡೆಕೋರರು ಬ್ಯಾಂಕಿನ ಹಿಂಬದಿಯ ಗೇಟ್ ಮೂಲಕ ಒಳ ಪ್ರವೇಶಿಸಿದ್ದರು ಎಂದು ತಿಳಿದು ಬಂದಿತ್ತು.
ಇದನ್ನೂ ಓದಿ :ಲಾಕರ್ನಲ್ಲಿಟ್ಟಿದ್ದ ಚಿನ್ನಾಭರಣ ನಾಪತ್ತೆ ಆರೋಪ: ದೂರು ದಾಖಲು