ಕೋಯಿಕ್ಕೋಡ್ (ಕೇರಳ): ಬ್ಯಾಂಕ್ ಸಾಲ ಎಂದರೆ ಅನೇಕರಿಗೆ ಎದೆ ಝಲ್ ಎನ್ನುತ್ತದೆ. ಸಾಲದ ಹಣ ಕಟ್ಟದೇ ಹೋದರೆ ಬ್ಯಾಂಕ್‌ನವರು ನಮ್ಮ ವಸ್ತುಗಳನ್ನು ಮುಲಾಜಿಲ್ಲದೇ ಜಪ್ತಿ ಮಾಡುತ್ತಾರೆ. ಇಲ್ಲವೇ ಕೋರ್ಟ್ಗೆ ಎಳೆಯುತ್ತಾರೆ ಎಂಬ ಭಯ ಸಾಲ ಪಡೆದ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ.
ಆದರೆ, ಇಲ್ಲೊಂದು ಕುತೂಹಲಕಾರಿ ಘಟನೆ ನಡೆದಿದೆ. ಕೇರಳದ ಕೋಯಿಕ್ಕೋಡ್‌ನಲ್ಲಿ ಬ್ಯಾಂಕ್ವೊಂದರ ಸಿಬ್ಬಂದಿ ಸಾಲದ ಹಣ ಮರು ಪಾವತಿಸದ ಕಾರಣಕ್ಕೆ ಜಪ್ತಿ ಮಾಡಲು ಬಂದಿದ್ದ ಮನೆಗೇ 'ಮರುಜೀವ' ತುಂಬಿದ್ದಾರೆ.!
ಹೌದು, ಸಾಲದ ಹಣ ಮರು ಪಾವತಿಸದ ಕಾರಣ ಮನೆ ಜಪ್ತಿಗೆಂದು ಬಂದಿದ್ದ ಬ್ಯಾಂಕ್ ಸಿಬ್ಬಂದಿಯೇ ಮನೆ ಕಟ್ಟಿಸಿದ ಕಥೆಯಿದು. ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಕಪ್ಪಾಡ್ ಬಳಿಯ ಉತ್ತರ ವಿಕಾಸ್ ನಗರದ ನಿವಾಸಿ ಶಶಿ ಮತ್ತು ಆತನ ತಾಯಿ ಸರೋಜಿನಿಗಾಗಿ ಪ್ರೀತಿಯ ಮನೆಯನ್ನು ಬ್ಯಾಂಕ್ ನೌಕರರೇ ಕಟ್ಟಿಕೊಟ್ಟಿದ್ದಾರೆ.
ಶಶಿ ಎಂಬಾತ ಬ್ಯಾಗ್ ತಯಾರಿಕೆ ಉದ್ಯಮಕ್ಕಾಗಿ ಎಸ್‌ಬಿಐನಿಂದ ಐದು ವರ್ಷಗಳ ಹಿಂದೆ 50 ಸಾವಿರ ರೂ. ಸಾಲ ಪಡೆದಿದ್ದರು. ಆದರೆ, ಬಳಿಕ ಪಾರ್ಶ್ವವಾಯುವಿಗೆ ತುತ್ತಾದ ಅವರು ಸಾಲ ತೀರಿಸಲಾಗದ ಪರಿಸ್ಥಿತಿಗೆ ತಲುಪಿದ್ದರು. ಈ ನಡುವೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ದ ಕೊಯಿಲಾಂಡಿ ಎಸ್‌ಎಂಇ ಶಾಖೆಯ ಮುಖ್ಯ ವ್ಯವಸ್ಥಾಪಕ ಎಂ.ಮುರಹರಿ ಅವರು ಬಡ್ಡಿ ಹಣ ಸೇರಿ 70 ಸಾವಿರ ರೂ. ಸಾಲದ ಹಣವನ್ನು ವಸೂಲಿ ಮಾಡಲೆಂದು ಶಶಿ ಮನೆಗೆ ಬಂದಿದ್ದರು. ಹಾಗೆ ಮನೆಗೆ ಬಂದಿದ್ದ ಮುಖ್ಯ ವ್ಯವಸ್ಥಾಪಕ ಯಾವುದೇ ಸಮಯದಲ್ಲಿ ಬೀಳುವ ಸ್ಥಿತಿಯಲ್ಲಿದ್ದ ಮನೆಯನ್ನು ಕಂಡು ಮರುಗಿದರು.
ಬ್ಯಾಂಕ್ ಮ್ಯಾನೇಜರ್ಗೆ ಶಶಿಯ ಅಸಹಾಯಕ ಸ್ಥಿತಿ ಅರ್ಥವಾಗಿತ್ತು. ಇದರ ಜತೆಗೆ ಶೌಚಾಲಯವಿಲ್ಲದ ಮನೆಯನ್ನು ನೋಡಿಯೂ ಅವರಿಗೆ ಆಘಾತವಾಯಿತು. ಆ ಬಳಿಕ ಶಶಿಯ ಮನೆಯ ಪರಿಸ್ಥಿತಿ ಬಗ್ಗೆ ತಮ್ಮ ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡರು. ಆಗ ಸಹೋದ್ಯೋಗಿಗಳ ಮನಸ್ಸು ಕರಗಿ, ಒಟ್ಟಾರೆ ಒಂಭತ್ತು ಜನ ನೌಕರರು ಸೇರಿಕೊಂಡು ತಮ್ಮ ಹಣದಿಂದಲೇ ಶಶಿಗೆ ಮನೆ ಕಟ್ಟಲು ಆರಂಭಿಸಿದರು. ಸಂಜೆ ಕೆಲಸ ಮುಗಿದ ಬಳಿಕ ಎಲ್ಲ ನೌಕರರು ಕಲ್ಲು, ಮರಳು, ಸಿಮೆಂಟ್ ತಂದು ಮನೆಗೆ ಜೀವ ತುಂಬಿದರು.
ಮ್ಯಾನೇಜರ್ ಎಂ.ಮುರಹರಿ ಜತೆಗೆ ಸಹೋದ್ಯೋಗಿಗಳಾದ ಜನಾರ್ದನನ್, ಅಶ್ವಿನ್ ಮೋಹನ್, ಪ್ರಶಾಂತ್ ಕೃಷ್ಣ, ಅಭಿನವ್ ದೇವ್, ಸತೀಶನ್, ಚಂದ್ರನ್, ರಮ್ಯಾ ಮತ್ತು ಅನುಶ್ರೀ ಕೈ ಜೋಡಿಸಿ, ಮನೆಯ ಚಾವಣಿ ಬದಲಾಯಿಸಿದರು. ಅಡುಗೆ ಕೋಣೆಗೆ ಕಾಂಕ್ರಿಟ್ ಹಾಕಿದರು. ಜತೆಗೆ ಶೌಚಾಲಯ ಸೇರಿ ಮತ್ತು ಮೂಲಭೂತ ಸೌಕರ್ಯಗಳೊಂದಿಗೆ ಮನೆಯನ್ನು ನವೀಕರಿಸಿದರು. ಪರಿಣಾಮ ವರ್ಷಗಳಿಂದ ಮನೆಯ ಚಾವಣಿ, ಶೌಚಾಲಯವಿಲ್ಲದೇ ಹಾಗೆಯೇ ಜೀವಿಸುತ್ತಿದ್ದ ಶಶಿ ಮತ್ತು ಆತನ ತಾಯಿ ಈಗ ನೆಮ್ಮದಿಯಿಂದ ಬದುಕುವಂತಾಗಿದೆ.