ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸಮ್ಮುಖದಲ್ಲಿ ಮಂಗಳವಾರ ಭಾರತ ಮತ್ತು ಬಾಂಗ್ಲಾದೇಶ ನಡುವೆ ಏಳು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ನಡೆದ ಉಭಯ ರಾಷ್ಟ್ರಗಳ ನಿಯೋಗ ಮಟ್ಟದ ಮಾತುಕತೆಯಲ್ಲಿ ಈ ಒಪ್ಪಂದಕ್ಕೆ ಸಹಿ ಮಾಡಲಾಯಿತು.
ಪ್ರಧಾನಿ ನರೇಂದ್ರ ಮತ್ತು ಪ್ರಧಾನಿ ಶೇಖ್ ಹಸೀನಾ ನೇತೃತ್ವದಲ್ಲಿ ಮಾತುಕತೆಯಲ್ಲಿ ಸಂಪರ್ಕ, ಇಂಧನ, ಜಲ ಸಂಪನ್ಮೂಲಗಳು, ವ್ಯಾಪಾರ ಮತ್ತು ಹೂಡಿಕೆ, ಗಡಿ ನಿರ್ವಹಣೆ ಮತ್ತು ಭದ್ರತೆ, ಅಭಿವೃದ್ಧಿ ಪಾಲುದಾರಿಕೆ ಮತ್ತು ಪ್ರಾದೇಶಿಕ ಹಾಗೂ ಬಹುಪಕ್ಷೀಯ ವಿಷಯಗಳಿಗೆ ಚರ್ಚಿಸಲಾಯಿತು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಅಲ್ಲದೇ, ಸಭೆಯ ನಂತರ ಎರಡೂ ಕಡೆ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದೆ. ಭಯೋತ್ಪಾದನೆಯ ವಿಷಯದ ಬಗ್ಗೆ ಚರ್ಚಿಸಲಾಯಿತು ಮತ್ತು ವಿರೋಧಿ ಶಕ್ತಿಗಳನ್ನು ಎದುರಿಸಲು ಒತ್ತು ನೀಡಲಾಯಿತು. ವಿರೋಧಿ ಶಕ್ತಿಗಳನ್ನು ಒಟ್ಟಾಗಿ ಎದುರಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಜೊತೆಗೆ ಪ್ರವಾಹ ತಗ್ಗಿಸುವ ನಿಟ್ಟಿನಲ್ಲಿ ನಮ್ಮ ಸಹಕಾರ ವಿಸ್ತರಿಸಿದ್ದೇವೆ. ಬಾಂಗ್ಲಾದೇಶದೊಂದಿಗೆ ಪ್ರವಾಹದ ಬಗ್ಗೆ ಸೂಕ್ತವಾದ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇಂದು ಬಾಂಗ್ಲಾದೇಶವು ಭಾರತದ ಅತಿದೊಡ್ಡ ಅಭಿವೃದ್ಧಿ ಹಾಗೂ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಅಲ್ಲದೇ, ಜನರ ಸಹಕಾರದಿಂದ ನಿರಂತರ ಸುಧಾರಣೆಯಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಪರಸ್ಪರ ಸಹಕಾರ ಹೆಚ್ಚಿದೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ನಾನು ವಿವಿಧ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಚರ್ಚೆ ನಡೆಸಿದ್ದೇವೆ. ಕೋವಿಡ್ ಸಾಂಕ್ರಾಮಿಕ ಮತ್ತು ಇತ್ತೀಚಿನ ಜಾಗತಿಕ ವಿದ್ಯಮಾನಗಳಿಂದ ನಾವು ಪಾಠಗಳನ್ನು ಕಲಿಯಬೇಕಿದೆ ಮತ್ತು ನಮ್ಮ ಆರ್ಥಿಕತೆ ಬಲಪಡಿಸಬೇಕು ಎಂದು ಮೋದಿ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಭಾರತವು ಸ್ವಾತಂತ್ರ್ಯದ 75ನೇ ವರ್ಷಾಚರಣೆ ನಿಮಿತ್ತ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ನಾನು ಭಾರತ ಸರ್ಕಾರ ಮತ್ತು ನನ್ನ ಭಾರತೀಯ ಸ್ನೇಹಿತರನ್ನು ಅಭಿನಂದಿಸಲು ಬಯಸುತ್ತೇನೆ. ಇಂದು ಪ್ರಧಾನಿ ಮೋದಿ ಮತ್ತು ನಾನು ಮತ್ತೊಂದು ಸುತ್ತಿನ ಫಲಪ್ರದ ಚರ್ಚೆ ಪೂರ್ಣಗೊಳಿಸಿದ್ದೇವೆ. ಅದರ ಫಲಿತಾಂಶವು ಎರಡೂ ದೇಶಗಳ ಜನರಿಗೆ ಪ್ರಯೋಜನವಾಗಲಿದೆ. ನಾವು ನಿಕಟ ಸ್ನೇಹ ಮತ್ತು ಸಹಕಾರದಿಂದ ಸಭೆ ನಡೆಸಿದ್ದೇವೆ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಶೇಖ್ ಹಸೀನಾ ಅವರು ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ನಂತರ ರಾಷ್ಟ್ರಪತಿ ಭವನದಲ್ಲಿ ಅವರನ್ನು ಬರ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿ, ಭಾರತವು ನಮ್ಮ ಸ್ನೇಹಿತ. ನಾನು ಇಲ್ಲಿಗೆ ಬಂದಾಗಲೆಲ್ಲ ನನಗೆ ಸಂತೋಷವಾಗಿದೆ, ಅದರಲ್ಲೂ ವಿಶೇಷವಾಗಿ ನಮ್ಮ ವಿಮೋಚನಾ ಯುದ್ಧದ ಸಮಯದಲ್ಲಿ ಭಾರತ ನೀಡಿದ ಕೊಡುಗೆಯನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ನಾವು ಸೌಹಾರ್ದ ಸಂಬಂಧವನ್ನು ಹೊಂದಿದ್ದೇವೆ. ನಾವು ಪರಸ್ಪರ ಸಹಕರಿಸುತ್ತಿದ್ದೇವೆ ಎಂದು ಬಾಂಗ್ಲಾದೇಶ ಪ್ರಧಾನಿ ಹೇಳಿದರು.
ಇದನ್ನೂ ಓದಿ:ನಾನು ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ: ಬಿಹಾರ ಸಿಎಂ ನಿತೀಶ್ಕುಮಾರ್