ಕೋಲ್ಕತ್ತಾ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದ ಅತಿ ದೊಡ್ಡ ಹಬ್ಬ ದುರ್ಗಾಪೂಜೆಗೆ ಮುಂಚಿತವಾಗಿ ಭಾರತಕ್ಕೆ ಸುಮಾರು 4,000 ಮೆಟ್ರಿಕ್ ಟನ್ ಹಿಲ್ಸಾ ಎಂಬ ಬೆಂಗಾಲಿ ಮೀನುಗಳನ್ನು ರಫ್ತು ಮಾಡಲು ಬಾಂಗ್ಲಾದೇಶ ಸರ್ಕಾರ ವ್ಯಾಪಾರಿಗಳಿಗೆ ಅನುಮತಿ ನೀಡಿದೆ.
ಬಾಂಗ್ಲಾದ ವಾಣಿಜ್ಯ ಸಚಿವಾಲಯವು ಭಾರತಕ್ಕೆ 3,950 ಮೆಟ್ರಿಕ್ ಟನ್ ಹಿಲ್ಸಾ ಮೀನುಗಳನ್ನು ರಫ್ತು ಮಾಡಲು 79 ವ್ಯಾಪಾರ ಸಂಸ್ಥೆಗಳಿಗೆ ಒಪ್ಪಿಗೆ ಕೊಟ್ಟಿದೆ. ಈ ನಿರ್ಧಾರದ ಮೂಲಕ ರಫ್ತುದಾರರು ತಲಾ 50 ಮೆಟ್ರಿಕ್ ಟನ್ ಹಿಲ್ಸಾ ಮೀನುಗಳನ್ನು ರಫ್ತು ಮಾಡಲು ಸಾಧ್ಯವಾಗಲಿದೆ.
ಪ್ರಧಾನಿ ಕಚೇರಿಯ ಅಧಿಕೃತ ಹೇಳಿಕೆಯ ಪ್ರಕಾರ, ಮೀನು ವ್ಯಾಪಾರಕ್ಕೆ ನೀಡಿರುವ ಅನುಮತಿ ಆದೇಶವು ಅಕ್ಟೋಬರ್ 30 ರವರೆಗೆ ಜಾರಿಯಲ್ಲಿರುತ್ತದೆ. ಬಾಂಗ್ಲಾ ರಾಷ್ಟ್ರೀಯ ಮೀನು ಹಿಲ್ಸಾಗೆ ಭೌಗೋಳಿಕ ಸೂಚಕ ಟ್ಯಾಗ್ ಇದೆ.
2020ರಲ್ಲಿ ಪ್ರಧಾನಿ ಹಸೀನಾ ಕೋಲ್ಕತ್ತಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರತಕ್ಕೆ ಹಿಲ್ಸಾಗಳ ರಫ್ತಿನ ಮೇಲಿನ ನಿಷೇಧ ಕ್ರಮ ತೆಗೆದು ಹಾಕುವಂತೆ ಸಿಎಂ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದರು. ಉತ್ತರ ಬಂಗಾಳದ ತೀಸ್ತಾ ನದಿ ವಿವಾದ ಬಗೆಹರಿದರೆ ನಿಷೇಧ ತೆರವುಗೊಳಿಸುವುದಾಗಿ ಶೇಖ್ ಹಸೀನಾ ಆ ಸಂದರ್ಭದಲ್ಲಿ ಹೇಳಿದ್ದರು. (ಎಎನ್ಐ)
ಮುಸ್ಲಿಂ ಧೋಬಿಗಳಿಗೆ ಉಚಿತ ವಿದ್ಯುತ್:ತೆಲಂಗಾಣದ ಬಿಆರ್‌ಎಸ್ ಸರ್ಕಾರವು ಮುಸ್ಲಿಂ ಧೋಬಿಗಳಿಗೆ ಮತ್ತು ಲಾಂಡ್ರಿ ಅಂಗಡಿಗಳಿಗೆ ತಿಂಗಳಿಗೆ 250 ಯೂನಿಟ್ ಉಚಿತ ವಿದ್ಯುತ್ ನೀಡಲು ನಿರ್ಧರಿಸಿದೆ. 'ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು, ಮುಸ್ಲಿಂ ಧೋಬಿಗಳು ಮತ್ತು ಲಾಂಡ್ರಿ ಅಂಗಡಿಗಳಿಗೆ ತಿಂಗಳಿಗೆ 250 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಸರಬರಾಜು ಯೋಜನೆ ಜಾರಿಗೊಳಿಸುತ್ತಿದೆ' ಎಂದು ಮಂಗಳವಾರ ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ಲಾಂಡ್ರಿ ವೃತ್ತಿಯಲ್ಲಿ ತೊಡಗಿರುವ ಹಲವಾರು ಮುಸ್ಲಿಂ ಧೋಬಿಗಳಿಗೆ ಉಚಿತ ವಿದ್ಯುತ್ ಅಗತ್ಯವಿದೆ ಎಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ಇದೀಗ ಸಿಎಂ ಕೆ.ಚಂದ್ರಶೇಖರ್ ರಾವ್ ಅವರು ಮುಸ್ಲಿಂ ಧೋಬಿಗಳಿಗೆ ಮತ್ತು ಲಾಂಡ್ರಿ ಅಂಗಡಿಗಳಿಗೆ ಈ ಯೋಜನೆಯನ್ನು ವಿಸ್ತರಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿದ್ದಾರೆ.
ಕಚ್ಚಾ ತೈಲ ಬೆಲೆ ಗಗನಕ್ಕೇರುವ ಸಾಧ್ಯತೆ:ಮೇ ಮತ್ತು ಜೂನ್ ತಿಂಗಳಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲ 73-75 ಡಾಲರ್ ನಡುವೆ ಲಭ್ಯವಿತ್ತು. ಆದರೆ ಈಗ ಅದು 90 ಡಾಲರ್‌ಗೆ ತಲುಪಿದೆ. ಇದರಿಂದಾಗಿ ತೈಲ ಮಾರುಕಟ್ಟೆ ಕಂಪನಿಗಳಿಂದ ಇಂಧನ ಬೆಲೆ ತಗ್ಗಿಸುವ ಸಾಧ್ಯತೆ ಕಡಿಮೆಯಿದೆ. ಸೌದಿ ಅರೇಬಿಯಾ ಮತ್ತು ರಷ್ಯಾ ಇತ್ತೀಚೆಗೆ ಈ ವರ್ಷದ ಅಂತ್ಯದವರೆಗೆ ಉತ್ಪಾದನೆ ಮತ್ತು ರಫ್ತು ಕಡಿತವನ್ನು ಮುಂದುವರೆಸುವುದಾಗಿ ಘೋಷಿಸಿದ್ದು ತೈಲ ಬೆಲೆ ಅಧಿಕವಾಗಲಿದೆ.
ಇದನ್ನೂ ಓದಿ:ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು: ಸಿಡಬ್ಲ್ಯೂಎಂಎ ಆದೇಶ ಮರುಪರಿಶೀಲನೆ ಕೋರಿ ಸುಪ್ರೀಂಕೋರ್ಟ್ ಮೊರೆ ಹೋದ ರಾಜ್ಯ ಸರ್ಕಾರ