ಚೆನ್ನೈ (ತಮಿಳುನಾಡು): ಮೇಲ್ಮರುವತ್ತೂರು ಆದಿ ಪರಾಶಕ್ತಿ ಪೀಠದ ಆಧ್ಯಾತ್ಮಿಕ ಗುರು ಹಾಗೂ ಭಕ್ತರಿಂದ 'ಅಮ್ಮ' ಎಂದೇ ಖ್ಯಾತರಾಗಿದ್ದ ಬಂಗಾರು ಅಡಿಕಳರ ಅವರು ಅನಾರೋಗ್ಯದಿಂದ ನಿನ್ನೆ (ಅ.19) ಸಂಜೆ ವಿಧಿವಶರಾಗಿದ್ದಾರೆ. ಬಂಗಾರು ಅಡಿಕಳರ ಅವರ ಪಾರ್ಥಿವ ಶರೀರವನ್ನು ಮೇಲ್ಮರುವತ್ತೂರಿನ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ.
ವಿವಿಧೆಡೆ ಇರುವ ಬಂಗಾರು ಅಡಿಕಳರ ಭಕ್ತರು ಆನ್ಲೈನ್ನಲ್ಲಿ ಸಂತಾಪ ಸೂಚಿಸಿದರು. ಅಲ್ಲದೇ, ಹಲವು ರಾಜಕೀಯ ವ್ಯಕ್ತಿಗಳು ಅಂತಿಮ ದರ್ಶನ ಪಡೆದರು. ಹಲವು ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಇಂದು ನಡೆಯಲಿರುವ ಬಂಗಾರು ಅಡಿಕಳರ ಅವರ ಅಂತ್ಯಕ್ರಿಯೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ..
ಬಂಗಾರು ಅಡಿಕಳರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ: ''ಬಂಗಾರು ಅಡಿಕಳರ ನಿಧನದಿಂದ ತೀವ್ರ ದುಃಖವಾಗಿದೆ. ಆಧ್ಯಾತ್ಮಿಕತೆ ಮತ್ತು ಸಹಾನುಭೂತಿಯಿಂದ ಸಮೃದ್ಧವಾಗಿರುವ ಅವರ ಜೀವನವು ಅನೇಕರಿಗೆ ಮಾರ್ಗದರ್ಶಕ ಬೆಳಕು. ಮಾನವೀಯತೆಗೆ ತಮ್ಮ ದಣಿವರಿಯದ ಸೇವೆ ಮತ್ತು ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಅವರು ಅನೇಕರ ಜೀವನದಲ್ಲಿ ಭರವಸೆ ಮತ್ತು ಜ್ಞಾನದ ಬೀಜಗಳನ್ನು ಬಿತ್ತಿದ್ದಾರೆ. ಅವರ ಕಾರ್ಯಗಳು ಯುವಪೀಳಿಗೆಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುತ್ತಲೇ ಇರುತ್ತದೆ'' ಎಂದು ಸಾಮಾಜಿಕ ಜಾಲತಾಣವಾದ 'ಎಕ್ಸ್'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.