ಕೊಡೆರ್ಮಾ (ಜಾರ್ಖಂಡ್): ಮೊಬೈಲ್‌ನ ಒಂದೇ ಕ್ಲಿಕ್‌ನಲ್ಲಿ ಜಗತ್ತನ್ನು ಸಂಪರ್ಕಿಸುವಷ್ಟು ಇಂದಿನ ಡಿಜಿಟಲ್ ಯುಗ ಕ್ರಾಂತಿ ಮಾಡಿದೆ. ಆದರೆ, ಜಾರ್ಖಂಡ್ನ ಕೊಡೆರ್ಮಾ ಜಿಲ್ಲೆಯ ಬಂಗಾಖ್ಲಾರ್ ಗ್ರಾಮದಲ್ಲಿ ಇಂದಿಗೂ ಮೊಬೈಲ್ ನೆಟ್‌ವರ್ಕ್ ಇಲ್ಲ. ನೆಟ್ವರ್ಕ್ಗಾಗಿ ಗ್ರಾಮಸ್ಥರು ಮೊಬೈಲ್ ಹಿಡಿದು ಮರಗಳನ್ನು ಏರಿ ಕುಳಿತುಕೊಳ್ಳುವ ಹಾಗೂ ಮನೆಯ ಛಾವಣಿಗಳ ಮೇಲೆಯೇ ಮೊಬೈಲ್ಗಳನ್ನು ಇಡುವ ಪರಿಸ್ಥಿತಿ ಇದೆ.
ಶೀಘ್ರದಲ್ಲೇ ದೇಶದಲ್ಲಿ 5ಜಿ ನೆಟ್‌ವರ್ಕ್ ಬಿಡುಗಡೆಯಾಗಲಿದೆ ಮತ್ತು ಮೊಬೈಲ್ ಇಂಟರ್ನೆಟ್ ಅತ್ಯಂತ ವೇಗವಾಗಿ ಲಭ್ಯವಾಗಲಿದೆ. ಸಂಪೂರ್ಣವಾಗಿ ಕಾಡು ಮತ್ತು ಪರ್ವತಗಳಿಂದ ಕೂಡಿರುವ ಬಂಗಾಖ್ಲಾರ್ ಗ್ರಾಮ ಮಾತ್ರ ನೆಟ್ವರ್ಕ್ನಿಂದ ದೂರ ಉಳಿದಿದೆ. ಇಲ್ಲಿ ಮೊಬೈಲ್‌ನಲ್ಲಿ ಮಾತನಾಡಬೇಕಾದರೆ ಜನರು ಮರ ಹತ್ತಿ ಕೂಡಬೇಕು, ಇಲ್ಲವೇ ಬೆಟ್ಟಕ್ಕೆ ಹೋಗಿ ಮಾತನಾಡುತ್ತಾರೆ.
ಮೊಬೈಲ್ ನೆಟ್ವರ್ಕ್ಗಾಗಿ ಮರ ಏರುತ್ತಿರುವ ಜನ.. ಸೌಲಭ್ಯಕ್ಕಾಗಿ ಏನೇನೋ ಕಸರತ್ತು ಅಲ್ಲದೇ, ನೆಟ್‌ವರ್ಕ್ ಸಿಗಲಿ ಎಂದು ಜನರು ತಮ್ಮ ಮೊಬೈಲ್ಗಳನ್ನು ಮನೆಯ ಛಾವಣಿ ಮೇಲೆ ಅಥವಾ ಮರದ ಮೇಲೆ ತೂಗಿ ಹಾಕಬೇಕಾಗಿರುವುದೇ ನಿತ್ಯ ಕೆಲಸವಾಗಿದೆ. ಆದರೂ, ನೆಟ್‌ವರ್ಕ್ ಸಿಗುವುದೇ ಅಪರೂಪ. ಪಂಚಾಯಿತಿಯಲ್ಲಿ ಪ್ರಜ್ಞಾ ಕೇಂದ್ರವೂ ಇದೆ. ಆದರೆ ನೆಟ್‌ವರ್ಕ್ ಕೊರತೆಯಿಂದ ಪ್ರಜ್ಞಾ ಕೇಂದ್ರವು ಆಗಾಗ್ಗೆ ಮುಚ್ಚಲ್ಪಡುತ್ತದೆ. ಒಂದು ವೇಳೆ ಪ್ರಜ್ಞಾ ಕೇಂದ್ರ ತೆರೆದಿದ್ದರೂ ನೆಟ್‌ವರ್ಕ್ ಕೊರತೆಯಿಂದ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ಕೆಲಸಗಳೇ ಆಗುವುದಿಲ್ಲ.
ಪ್ರಜ್ಞಾ ಕೇಂದ್ರದ ನಿರ್ವಾಹಕರು ಗ್ರಾಮದ ಎತ್ತರದ ಸ್ಥಳಕ್ಕೆ ಹೋಗಿ ಮೊಬೈಲ್ನಲ್ಲಿಯೇ ಕಡತ ಡೌನ್ಲೋಡ್ ಮಾಡಿಕೊಂಡು ನಂತರ ಕೇಂದ್ರಕ್ಕೆ ಬಂದು ಅದರ ಪ್ರಿಂಟ್ ಔಟ್ ಜನರಿಗೆ ನೀಡುತ್ತಾರೆ. ಈ ಪರಿಸ್ಥಿತಿ ನಿತ್ಯ ಹೆಚ್ಚು ಕಡಿಮೆ ನಡೆಯುತ್ತಲೇ ಇರುತ್ತದೆ. ಹೀಗಾಗಿ ಸೂಕ್ತವಾದ ಸಮಯಕ್ಕೆ ಸರ್ಕಾರಿ ಸೌಲಭ್ಯಗಳೂ ಸಿಗದೆ ಗ್ರಾಮಸ್ಥರು ವಂಚಿತರಾಗುವಂತಾಗಿದೆ.
ಇದನ್ನೂ ಓದಿ:ಭುವನೇಶ್ವರದಲ್ಲಿ ಸಿಮ್ ಬಾಕ್ಸ್ ದಂಧೆ: ಪತ್ತೆ ಹಚ್ಚಿದ ಸೈಬರ್ ಪೊಲೀಸರು