ಹೈದರಾಬಾದ್ (ತೆಲಂಗಾಣ): ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ತಿರುವು ಪಡೆದುಕೊಂಡಿದೆ. 10ನೇ ತರಗತಿಯ ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಸಂಚುಕೋರ ಕರೀಂನಗರ ಸಂಸದ ಲಕ್ಷ್ಮಣ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ವಿರುದ್ಧ ಪೊಲೀಸರು ಆರೋಪ ಹೊರೆಸಿದ್ದಾರೆ. ವಾರಂಗಲ್ ಕಮಿಷನರೇಟ್ ಕಮಲಾಪುರದಲ್ಲಿ ನಡೆದ ಸೋರಿಕೆ ಪ್ರಕರಣದಲ್ಲಿ ಸಂಜಯ್ ಅವರನ್ನು ಪ್ರಮುಖ ಆರೋಪಿಯನ್ನಾಗಿ ಗುರುತಿಸಲಾಗಿದೆ.
ಸಂಜಯ್ ಬಂಡಿ ಅವರ ಪ್ರಚೋದನೆಯ ಮೇರೆಗೆ ಉಳಿದ ಆರೋಪಿಗಳು ಪರೀಕ್ಷಾ ಕೇಂದ್ರದಿಂದ ರಹಸ್ಯವಾಗಿ ಪ್ರಶ್ನೆ ಪತ್ರಿಕೆ ಸಂಗ್ರಹಿಸಿ ವಾಟ್ಸಾಪ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಂಡಿ ಸಂಜಯ್ ವಿರುದ್ಧ ಸೆಕ್ಷನ್ 120 (ಬಿ), 420, 447, 505 (1) (ಬಿ) ಐಪಿಸಿ, 4 (ಎ), 6, ಟಿಎಸ್ ಪಬ್ಲಿಕ್ ಎಕ್ಸಾಮಿನೇಷನ್ (ದುಷ್ಕೃತ್ಯಗಳ ತಡೆ) ಕಾಯ್ದೆ-1997 ರ ರೆಡ್‌ವಿತ್ 8, ಸೆಕ್ಷನ್ 66-ಡಿ ಐಟಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾಯ್ದೆ-2008 ಪ್ರಕರಣ ಸಹ ಅವರ ವಿರುದ್ಧ ದಾಖಲಿಸಲಾಗಿದೆ.
ಮಂಗಳವಾರ ಮಧ್ಯರಾತ್ರಿ ಕರೀಂನಗರದಲ್ಲಿ ಸಂಜಯ್ ಬಂಧನವಾದಾಗಿನಿಂದ ಬುಧವಾರ ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುವವರೆಗೆ ಪ್ರತಿ ಹಂತದಲ್ಲೂ ಉದ್ವಿಗ್ನತೆ ಮತ್ತು ನಾಟಕೀಯ ಬೆಳವಣಿಗೆ ನಡೆಯಿತು. ಬುಧವಾರ ನ್ಯಾಯಾಲಯಕ್ಕೆ ರಜೆ ಇದ್ದ ಕಾರಣ ಸಂಜೆ 6.50ರ ಸುಮಾರಿಗೆ ಪೊಲೀಸರು ಸಂಜಯ್ ಅವರನ್ನು ಹನುಮಕೊಂಡ ಜಿಲ್ಲೆಯ ಮುಖ್ಯ ಮುನ್ಸಿಫ್ ಮ್ಯಾಜಿಸ್ಟ್ರೇಟ್ ಅವರ ನಿವಾಸಕ್ಕೆ ಕರೆದೊಯ್ದರು. ಪೂರ್ವ ನಿದರ್ಶನಗಳನ್ನು ಪರಿಶೀಲಿಸಿದ ನಂತರ, ಜಿಲ್ಲಾ ಮುಖ್ಯ ಮುನ್ಸಿಫ್ ಮ್ಯಾಜಿಸ್ಟ್ರೇಟ್ ರಾಪೋಲು ಅನಿತಾ ಅವರು ಸಂಜಯ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಬಿಧಿಸಿ ಆದೇಶ ಹೊರಡಿಸಿದರು.
ರಾತ್ರಿ 8.30ಕ್ಕೆ ಪೊಲೀಸರು ಸಂಜಯ್ ಜೊತೆ ಬೂರ ಪ್ರಶಾಂತ್, ಗುಂಡೇಬೋಯಿನ ಮಹೇಶ್ ಮತ್ತು ಮಾವುತ ಶಿವಗಣೇಶ್ರನ್ನು ಕರೀಂನಗರ ಜೈಲಿಗೆ ಕರೆದೊಯ್ದರು. ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಸಂಜಯ್ ಬಂಧನವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯಾದ್ಯಂತ ಮೆರವಣಿಗೆ ನಡೆಸಿದರು. ಈ ವಿಷಯವನ್ನು ಪಕ್ಷದ ರಾಜ್ಯ ವ್ಯವಹಾರಗಳ ಉಸ್ತುವಾರಿ ತರುಂಚುಗ್, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಗಮನಕ್ಕೆ ತರಲಾಗಿದೆ. ಸಂಜಯ್ ಬಂಧನ ಕಾನೂನು ಬಾಹಿರವಾಗಿದ್ದು, ಕಾನೂನು ಮತ್ತು ರಾಜಕೀಯ ಹೋರಾಟ ನಡೆಸುತ್ತೇವೆ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಘೋಷಿಸಿದರು.
ಬಿಜೆಪಿ ಸಂಸದ ಲಕ್ಷ್ಮಣ್ ಮತ್ತು ಇತರರು ಬುಧವಾರ ದೆಹಲಿಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಸಂಸದೀಯ ಹಕ್ಕುಗಳ ಉಲ್ಲಂಘನೆಗಾಗಿ ತೆಲಂಗಾಣ ಪೊಲೀಸರ ವಿರುದ್ಧ ದೂರು ಸಲ್ಲಿಸಿದರು. ಇಂದೂ ಸಹ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಇನ್ನೊಂದೆಡೆ ಸಂಜಯ್ ವಿರುದ್ಧ ಆಡಳಿತ ಪಕ್ಷದ ಸಚಿವರು ಹಾಗೂ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಪ್ರತಿಕೃತಿ ದಹಿಸಿದರು. ದೆಹಲಿಯ ಹಿರಿಯರ ಕಣ್ಣಿಗೆ 10ನೇ ತರಗತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಸಂಚು ನಡೆದಿದೆ ಎಂದು ಆರೋಪಿಸಲಾಗಿದೆ. ಹರೀಶ್ ರಾವ್ ಸೇರಿದಂತೆ ಹಲವು ಸಚಿವರು ವಿವಿಧ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು. ಸಂಜಯ್ ವಿರುದ್ಧ ಪಿಡಿ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಪೊಲೀಸರು ನನ್ನನ್ನು ಹೊಡೆದರು:ನ್ಯಾಯಾಧೀಶರ ಮುಂದೆ ಬಂಡಿ ಸಂಜಯ್ ಆರೋಪ: ಸಂಜಯ್ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಪೊಲೀಸರು ನಿಮಗೆ ಹೊಡೆದಿದ್ದಾರಾ ಎಂದು ನ್ಯಾಯಾಧೀಶರು ಪ್ರಶ್ನಿಸಿದಾಗ, ಸಂಜಯ್ ಅವರು ತಮ್ಮ ಶರ್ಟ್ ಕಳಚಿ ಎಸಿಪಿ ಮತ್ತು ಸಿಐ ಹೊಡೆದಿದ್ದಾರೆ ಎಂದು ಗಾಯಗಳನ್ನು ತೋರಿಸಿದರು. ವಿನಾಕಾರಣ ಬಂಧಿಸಿದ್ದು, ಕಾರಣ ಹೇಳದೆ ದಿನವಿಡೀ ಹಲವು ಕಡೆ ಕರೆದೊಯ್ದು ಗೊಂದಲ ಸೃಷ್ಟಿಸಿದ್ದಾರೆ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು.
ಓದಿ:ಒತ್ತಡ, ಮನವಿಗೆ ಪಠ್ಯ ಪರಿಷ್ಕರಣೆ ಮಾಡಿಲ್ಲ: ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಪ್ರಸಾದ್