ನವದೆಹಲಿ:ದೆಹಲಿಯ ಹಲವು ಪ್ರದೇಶಗಳಲ್ಲಿ ಪಟಾಕಿ ನಿಷೇಧ ಮಾಡಿರುವ ನಿಯಮವನ್ನು ಉಲ್ಲಂಘಿಸಿ, ಜನರು ಭಾನುವಾರ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಶಹಪುರ್ ಜಾಟ್ ಮತ್ತು ಹೌಜ್ ಖಾಸ್ ಪ್ರದೇಶದಲ್ಲಿ ಜನರು ಪಟಾಕಿ ಸಿಡಿಸಿದರು. ಪಟಾಕಿ ಸಿಡಿಸಲು ಹಲವಾರು ಜನರು ಇಲ್ಲಿನ ಉದ್ಯಾನವನದಲ್ಲಿ ಜಮಾಯಿಸಿದ್ದು ಕಂಡುಬಂತು.
ಸಂಜೆ 4 ಗಂಟೆಯ ನಂತರ ಪಟಾಕಿ ಸಿಡಿಸುವ ತೀವ್ರತೆ ಹೆಚ್ಚಿರುವುದು ಕಂಡು ಬಂತು. ಆದರೆ, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದೆ. ಕೆಲವರನ್ನು ಹೊರತುಪಡಿಸಿದರೆ, ಹೆಚ್ಚಿನ ಜನರು ಸ್ಥಳೀಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಮ್ಮ ಮನೆಗಳಿಂದ ಹೊರಗೆ ಬಂದಿರಲಿಲ್ಲ.
ಪರಿಸರವಾದಿ ಭವ್ರೀನ್ ಕಂಧಾರಿ ಕಿಡಿ:ಪರಿಸರವಾದಿ ಭವ್ರೀನ್ ಕಂಧಾರಿ ಮಾತನಾಡಿ, ''ವಸತಿ ಪ್ರದೇಶ ಡಿಫೆನ್ಸ್ ಕಾಲೋನಿಯಲ್ಲಿಯೂ ಪಟಾಕಿ ಸಿಡಿಸಿರುವುದು ವರದಿಯಾಗಿದೆ. ಡಿಫೆನ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದ್ದರೂ ಯಾವುದೇ ಬದಲಾವಣೆ ಕಂಡುಬಂದಿಲ್ಲ'' ಎಂದು ಕಿಡಿಕಾರಿದರು. "ಸುಪ್ರಿಂಕೋರ್ಟ್ ಆದೇಶ ಉಲ್ಲಂಘಿಸಿ ಪಟಾಕಿಗಳನ್ನು ಸಿಡಿಸಲಾಗಿದೆ. ಇದನ್ನು ತಡೆಯಲು ಅಧಿಕಾರಿಗಳು ವಿಫಲರಾಗಿದ್ದಾರೆ. ಸುಪ್ರೀಂ ಕೋರ್ಟ್ ಈಗ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾಯ್ದು ನೋಡುತ್ತೇವೆ'' ಎಂದರು.
ರಾತ್ರಿ 7.30ರ ವರೆಗೆ ಗ್ರೇಟರ್ ಕೈಲಾಶ್ ಮತ್ತು ಚಿತ್ತರಂಜನ್ ಪಾರ್ಕ್ ಪ್ರದೇಶದಲ್ಲಿ ಪಟಾಕಿ ಸಿಡಿಸುವ ತೀವ್ರತೆ ಕಡಿಮೆ ಇತ್ತು. ಪೂಜೆ ಸಲ್ಲಿಸಿದ ನಂತರ ಜನರು ಪಟಾಕಿ ಸಿಡಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ದಕ್ಷಿಣ ದೆಹಲಿಯ ಛತ್ತರ್‌ಪುರ ಪ್ರದೇಶದಲ್ಲಿ ಸಂಜೆ 6 ಗಂಟೆಯಿಂದ ಪಟಾಕಿ ಸಿಡಿಸುವ ಸದ್ದು ಕೇಳಿಸುತ್ತಿತ್ತು. ಈ ಪ್ರದೇಶದಲ್ಲಿ ಅನೇಕ ಅಂಗಡಿಕಾರರು ನಿಷೇಧವನ್ನು ಉಲ್ಲಂಘಿಸಿ ಮಕ್ಕಳಿಗೆ ಸಣ್ಣ ಪಟಾಕಿಗಳನ್ನು ಮಾರಾಟ ಮಾಡುತ್ತಿರುವುದು ಕೂಡ ಕಂಡುಬಂತು. ಜೊತೆಗೆ ಈಸ್ಟ್ ಆಫ್ ಕೈಲಾಶ್ ಪ್ರದೇಶದಲ್ಲಿ ಕೆಲವರು ಪಟಾಕಿ ಸಿಡಿಸಿದ್ದಾರೆ. ಸಂಜೆ 6.30ರಿಂದ ದೂರದಲ್ಲಿ ಪಟಾಕಿ ಸಿಡಿಸುವ ಸದ್ದು ಮನೆಯಿಂದ ಕೇಳಿ ಬರುತ್ತಿತ್ತು.