ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯ ವಾಯು ಗುಣಮಟ್ಟ ತೀರಾ ಕಳಪೆಯಾಗಿದ್ದು, ಇದರ ತಡೆಗೆ ವಾಯು ಗುಣಮಟ್ಟ ನಿರ್ವಹಣಾ ಸಮಿತಿಯು (ಸಿಎಕ್ಯೂಎಂ) ಮಹತ್ವದ ಆದೇಶ ಹೊರಡಿಸಿದೆ. ನವೆಂಬರ್ 1 ರಿಂದ ಬಿಎಸ್-III ಮತ್ತು ಬಿಎಸ್-IV ಡೀಸೆಲ್ ಚಾಲಿತ ವಾಹನಗಳು ದೆಹಲಿ ಪ್ರವೇಶಿಸಲು ನಿಷೇಧಿಸಿದೆ. ಕೇವಲ ಬಿಎಸ್-VI ಬಸ್‌ಗಳು, ಸಿಎನ್‌ಜಿ ವಾಹನ, ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ರಾಜಧಾನಿ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ ಎಂದಿದೆ.
ವಾಯು ಮಾಲಿನ್ಯ ತಡೆಗೆ ಆದೇಶಿಸಿರುವ ಈ ನಿಯಮ ಸರ್ಕಾರಿ ಸೇರಿದಂತೆ ಖಾಸಗಿ ಬಸ್‌ಗಳಿಗೂ ಅನ್ವಯವಾಗಲಿದೆ. ಈ ಆದೇಶದಿಂದ ಶೇ.60ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಸ್ಥಗಿತಗೊಳ್ಳಲಿದ್ದು, ಪ್ರಯಾಣಿಕರ ಮೇಲೆ ನೇರ ಪರಿಣಾಮ ಬೀರಲಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ರಾಜಸ್ಥಾನ, ಪಂಜಾಬ್, ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ದೆಹಲಿಗೆ 5 ಸಾವಿರಕ್ಕೂ ಅಧಿಕ ಬಸ್‌ಗಳು ನಿತ್ಯ ಸಂಚಾರ ಮಾಡುತ್ತವೆ. ಇದರಲ್ಲಿ ಯುಪಿಎಸ್‌ಆರ್‌ಟಿಸಿಯ ಸುಮಾರು 1,000 ಬಸ್‌ಗಳು ಮತ್ತು ಉತ್ತರಾಖಂಡ ಸಾರಿಗೆ ಇಲಾಖೆಯ 300 ಕ್ಕೂ ಹೆಚ್ಚು ಬಸ್‌ಗಳು ದೆಹಲಿಗೆ ಬರುತ್ತವೆ. ಈ ಎಲ್ಲಾ ಬಸ್‌ಗಳ ಸಂಚಾರ ಬಂದ್ ಆಗಲಿದೆ.
ಶೇ.60 ರಷ್ಟು ಬಸ್ಗಳಿಗೆ ನಿರ್ಬಂಧ:ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ, ವಿವಿಧ ರಾಜ್ಯಗಳಿಂದ ದೆಹಲಿಗೆ ಬರುತ್ತಿರುವ ಸುಮಾರು 60 ಪ್ರತಿಶತ ಬಸ್‌ಗಳು ಬಿಎಸ್-III ಮತ್ತು ಬಿಎಸ್-4 ಆಗಿವೆ. ಇದಲ್ಲದೆ, ದೆಹಲಿಯಿಂದ ಹೊರಡುವ ಬಸ್ಗಳಲ್ಲೂ 1 ಸಾವಿರ ಇದೇ ರೀತಿಯ ಬಸ್ಗಳಾಗಿವೆ. ಹೀಗಾಗಿ ಸಂಚಾರ ಸಮಸ್ಯೆ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ.
ರಾಷ್ಟ್ರೀಯ ರಾಜಧಾನಿ ಪ್ರದೇಶದ(ಎನ್‌ಸಿಆರ್) ನಗರಗಳು ಮತ್ತು ದೆಹಲಿಗೆ ಸಂಚರಿಸುವ ಡೀಸೆಲ್ ಬಸ್‌ಗಳ ನಿರ್ಬಂಧಕ್ಕೆ ವಾಯು ಗುಣಮಟ್ಟ ನಿರ್ವಹಣಾ ಸಮಿತಿಯು ಗಡುವು ನಿಗದಿಪಡಿಸಿದೆ. 2024ರ ಜುಲೈನಿಂದ ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ, ಬಿಎಸ್-6 ಬಸ್‌ಗಳು ಮಾತ್ರ ಎನ್‌ಸಿಆರ್‌ನಲ್ಲಿ ಸಂಚರಿಸಬೇಕು. ಇದು ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯ ಎಂದು ಹೇಳಿದೆ.