ಭೋಪಾಲ್ (ಮಧ್ಯಪ್ರದೇಶ): ಸಾಮಾನ್ಯವಾಗಿ ಹೆಚ್ಚಿನವರು ತಾವು ಹುಟ್ಟಿದ ಊರಲ್ಲೇ ಬೆಳೆದು ಶಿಕ್ಷಣಕ್ಕಾಗಿಯೋ, ಉದ್ಯೋಗಕ್ಕಾಗಿಯೋ, ಇಲ್ಲ ಮದುವೆಯಾಗಿಯೋ ಬೇರೊಂದು ಊರು ಸೇರಿಕೊಳ್ಳುತ್ತಾರೆ. ಆದರೆ ಇಲ್ಲಿ ಹಾಗಲ್ಲ. ಈ ಹಳ್ಳಿಯಲ್ಲಿ ಮಗುವಿಗೆ ಜನ್ಮ ನೀಡಬೇಕಾದರೆನೇ ಬೇರೆ ಊರಿಗೆ ಹೋಗಬೇಕು. ಹಳ್ಳಿಯ 100 ವರ್ಷದ ತಾತನಿಂದ ಹಿಡಿದು 2 ವರ್ಷದ ಮಗುವಿನವರೆಗೂ ಯಾರೂ ಈ ಊರಿನಲ್ಲಿ ಹುಟ್ಟಿದವರೇ ಅಲ್ಲ. ಇದು ರಾಜ್ಗಢ್ ಜಿಲ್ಲೆಯ ಸಂಕ ಶ್ಯಾಮ್ ಗ್ರಾಮ. ಹೀಗೊಂದು ವಿಶೇಷ ಹಳ್ಳಿಯ ಕಥೆ ಇಲ್ಲಿದೆ.
ಭೋಪಾಲ್ನ ಈ ಹಳ್ಳಿಯಲ್ಲಿ ಯಾರೂ ಮಗು ಹೆರುವಂತಿಲ್ಲ. ಮಗುವಿಗೆ ಜನ್ಮ ನೀಡಬೇಕಾದರೆ ಬೇರೊಂದು ಹಳ್ಳಿಗೆ ಪಯಣಿಸಲೇಬೇಕು. ಇದು ಯಾವುದೇ ಪಂಚಾಯಿತಿ ಅಥವಾ ಸರ್ಕಾರ ವಿಧಿಸಿದ ನಿಯಮವೇನಲ್ಲ. ಮೂಢನಂಬಿಕೆಗೆ ಸಿಲುಕಿ ಇಡೀ ಹಳ್ಳಿಯೇ ಸ್ವತಃ ತಮ್ಮ ಕುಟುಂಬಗಳ ಮೇಲೆ ಹೇರಿಕೊಂಡಿರುವ ನಿಯಮಗಳಷ್ಟೇ. ಅಷ್ಟೇ ಅಲ್ಲ, ಈ ನಿರ್ಬಂಧಕ್ಕೆ ಜನರು ಸಂಪ್ರದಾಯದ ಹೆಸರು ಕೊಟ್ಟುಕೊಂಡಿದ್ದಾರೆ.
ಗ್ರಾಮದಲ್ಲಿ ವಾಸಿಸುವ ಯಾರೂ ಈ ಗ್ರಾಮದಲ್ಲಿ ಹುಟ್ಟಿದವರಲ್ಲ. ಏಳುನೂರು ಜನಸಂಖ್ಯೆಯಿರುವ ಗ್ರಾಮದಲ್ಲಿ ತನ್ನ ಹೊಕ್ಕುಳಬಳ್ಳಿ ಹುಟ್ಟುವಾಗಲೇ ಸಾವನ್ನಪ್ಪಿತು ಎಂದು ಹೇಳಿಕೊಳ್ಳುವ ಒಬ್ಬ ತಾಯಿಯೂ ಸಿಗುವುದಿಲ್ಲ. ಯಾಕೆಂದರೆ ಈ ಹಳ್ಳಿಯಲ್ಲಿ ಜನ್ಮ ನೀಡಿದರೆ ಮಗು ಸಾಯುತ್ತದೆ ಎನ್ನುವ ನಂಬಿಕೆಯಿಂದ ಬೇರೊಂದು ಹಳ್ಳಿಗೆ ಹೋಗಿಯೇ ಹೆರಿಗೆ ಮಾಡಿಸಿಕೊಂಡು ಬರುತ್ತಾರೆ ಮಹಿಳೆಯರು. ಹಾಗಾಗಿ ಪ್ರತಿ ಗರ್ಭಿಣಿಯೂ ಸಂಪ್ರದಾಯದ ಹೆಸರಲ್ಲಿ ಹಳ್ಳಿ ತೊರೆಯಲೇಬೇಕು ಎನ್ನುವ ನೋವು ಅನುಭವಿಸುತ್ತಿದ್ದಾರೆ.
ಎತ್ತಿನ ಬಂಡಿಯಲ್ಲಿ ಮಗಳ ಜನನ: ಇದೇ ಹಳ್ಳಿಯಲ್ಲೇ ನೆಲೆಸಿರುವ ಸಾವಿತ್ರಿ ಬಾಯಿ ತಮ್ಮ ಅನುಭವ ಹಂಚಿಕೊಳ್ಳುತ್ತಾ, 'ನನ್ನ ಅತ್ತಿಗೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಎತ್ತಿನ ಗಾಡಿಯಲ್ಲಿ ಊರಿನಿಂದ ಹೊರಗೆ ಕರೆದುಕೊಂಡು ಹೋಗಿ, ಹೆರಿಗೆ ಮಾಡಿಸಿ ಮತ್ತೆ ಮನೆಗೆ ಹಿಂದಿರುಗಿದ್ದೆವು. ಆಗ ವಾಹನದ ಸೌಲಭ್ಯ ಇರಲಿಲ್ಲ. ಆದರೀಗ ಎಲ್ಲ ವ್ಯವಸ್ಥೆ ಇದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಊರಿನ ಗಡಿಭಾಗದ ಹೊರಗೆ ತೇಗದ ಎಲೆಗಳ ಚಪ್ಪರ ಹಾಕಿದ ಜಾಗದಲ್ಲಿ ಮಕ್ಕಳಿಗೆ ಜನ್ಮ ನೀಡುತ್ತಾರೆ' ಎಂದರು.
ಸಾವು, ಬದುಕಿನ ಪ್ರಶ್ನೆ: ಈ ಹಳ್ಳಿಯಲ್ಲಿ ಈ ಬಗೆಗಿನ ಮೂಢನಂಬಿಕೆ ಎಷ್ಟು ಆಳವಾಗಿದೆ ಎಂದರೆ ದ್ವಿತೀಯ ಪಿಯುಸಿ ಓದುವ ಹುಡುಗಿಯೂ ತನ್ನ ಅಜ್ಜಿಯಂತೆಯೇ ಈ ಸಂಪ್ರದಾಯವನ್ನು ಪಾಲಿಸುತ್ತಾಳೆ. ಅದಕ್ಕೆ ಕಾರಣವೂ ಇದೆಯಂತೆ. ಅದೇನೆಂದರೆ, ಹತ್ತು ವರ್ಷಗಳ ಹಿಂದೆ ಒಬ್ಬ ಗರ್ಭಿಣಿ ನೋವು ಕಾಣಿಸಿಕೊಂಡಿರುವುದನ್ನು ತಡವಾಗಿ ಹೇಳಿದ ಕಾರಣ, ಹಳ್ಳಿಯಿಂದ ಹೊರ ಹೋಗಲು ಸಾಧ್ಯವಾಗದೆ ಅದೇ ಹಳ್ಳಿಯಲ್ಲಿ ಹೆರಿಗೆಯಾಗಿತ್ತು. ಆದರೆ ಹೆರಿಗೆ ವೇಳೆ ಮಗು ಸಾವನ್ನಪ್ಪಿದೆ. ಈ ಘಟನೆಯನ್ನೇ ಗಟ್ಟಿಯಾಗಿ ನಂಬಿಕೊಂಡಿರುವ ಇಲ್ಲಿನ ಜನ ಮತ್ತೆ ಆ ತಪ್ಪನ್ನು ಮಾಡಲು ಹೋಗಲೇ ಇಲ್ಲ.