ಮೊಹಾಲಿ(ಪಂಜಾಬ್): ಹರಿಯಾಣ ಭೇಟಿಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ನ ಮೊಹಾಲಿಗೆ ತೆರಳಿದ್ದು ಹೋಮಿ ಬಾಬಾ ಕ್ಯಾನ್ಸರ್ ಆಸ್ಪತ್ರೆ, ಸಂಶೋಧನಾ ಕೇಂದ್ರ ಲೋಕಾರ್ಪಣೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆ ತೊಟ್ಟು ಬಂದವರಿಗೆ ಭದ್ರತಾ ಸಿಬ್ಬಂದಿ ಅನುಮತಿ ನಿರಾಕರಿಸಿದ್ದಾರೆ. ಈ ಹಿಂದೆ ಪಂಜಾಬ್ ಪ್ರವಾಸ ಕೈಗೊಂಡಿದ್ದ ಮೋದಿ ಭದ್ರತೆಯಲ್ಲಿ ಲೋಪ ಕಂಡುಬಂದಿದ್ದು ಈ ಹೆಚ್ಚಿನ ನಿಗಾ ವಹಿಸಲಾಗಿತ್ತು.
ಪಂಜಾಬ್ನಲ್ಲಿ ಭಗವಂತ್ ಮಾನ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವಿದೆ. ಮಾನ್ ಸಿಎಂ ಆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿದೆ. ಸಾರ್ವಜನಿಕ ಕಾರ್ಯಕ್ರಮ ಆಯೋಜನೆಗೊಂಡಿದ್ದ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದು, ಜನರು ಕಪ್ಪು ಬಟ್ಟೆ ಧರಿಸಿ ಒಳಹೋಗಲು ಅನುಮತಿ ನೀಡಿಲ್ಲ.
24 ವಸ್ತುಗಳಿಗೆ ನಿಷೇಧ, ಕಟ್ಟುನಿಟ್ಟಿನ ಭದ್ರತೆ: ಕಾರ್ಯಕ್ರಮಕ್ಕೆ ಹಗ್ಗ, ಕ್ರೀಡಾ ಉಪಕರಣಗಳು, ವಾಕಿಟಾಕಿ, ನೀರಿನ ಬಾಟಲ್, ಕತ್ತರಿ, ಚಾಕು, ಚೂಪಾದ ಕಬ್ಬಿಣದ ವಸ್ತು, ರಾಸಾಯನಿಕ, ದಹಿಸುವ ವಸ್ತು, ಉಗುರು ಕಟ್ಟರ್, ಲಾಂಡ್ರಿ ಸೋಪ್, ರಿಮೋಟ್, ವೈರ್‌ಲೆಸ್ ಸಾಧನ, ಫುಟ್‌ಬಾಲ್, ಚೆಂಡು, ಆಕ್ಷೇಪಾರ್ಹ ಪದಾರ್ಥಗಳು, ಲೇಡಿ ಮೇಕಪ್ ಐಟಂ, ಕಪ್ಪು ಬಟ್ಟೆ ಅಥವಾ ಕರವಸ್ತ್ರ, ಕಪ್ಪು ಸ್ಪ್ರೇ, ಕಪ್ಪು ಶಾಯಿ ಅಥವಾ ಬಣ್ಣ, ಬ್ಯಾನರ್ ಅಥವಾ ಪೇಪರ್ ಪ್ರಿಂಟ್ ಔಟ್ ಪ್ರತಿ, ರಾಷ್ಟ್ರಧ್ವಜ ಹೊರತುಪಡಿಸಿ ಬೇರೆ ಧ್ವಜ, ಪೆನ್ನು, ಪೆನ್ಸಿಲ್ ಸೇರಿದಂತೆ ಈ ರೀತಿ ಹಲವು ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಭದ್ರತಾ ಸಿಬ್ಬಂದಿ ಅವಕಾಶ ನೀಡಿಲ್ಲ.