ನವದೆಹಲಿ:290 ಜನರನ್ನು ಬಲಿ ಪಡೆದ ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಗಾ ನಿಲ್ದಾಣದ ಬಳಿ ನಡೆದ ತ್ರಿವಳಿ ರೈಲು ದುರಂತಕ್ಕೆ 'ತಪ್ಪಾದ ಸಿಗ್ನಲಿಂಗ್ ಮತ್ತು ಸಿಬ್ಬಂದಿಯ ಅಚಾತುರ್ಯವೇ ಕಾರಣ' ಎಂದು ಉನ್ನತ ಮಟ್ಟದ ತನಿಖಾ ಸಮಿತಿಯ ವರದಿಯಲ್ಲಿ ಉಲ್ಲೇಖವಾಗಿದೆ. ಅಪಘಾತಕ್ಕೂ ಮುನ್ನ ಬಹುಹಂತಗಳಲ್ಲಿ ತಪ್ಪು ನಡೆದಿದ್ದು, ದುರಂತಕ್ಕೆ ಕಾರಣ ಎಂಬುದನ್ನು ಸಮಿತಿ ಪತ್ತೆ ಮಾಡಿದೆ.
ರೈಲ್ವೆ ಸುರಕ್ಷತಾ ಆಯೋಗವು (ಸಿಆರ್ಎಸ್) ರೈಲ್ವೆ ಮಂಡಳಿಗೆ ಸಲ್ಲಿಸಿದ ಸ್ವತಂತ್ರ ತನಿಖಾ ವರದಿಯಲ್ಲಿ ಪ್ರಮುಖವಾಗಿ ಸಿಗ್ನಲಿಂಗ್ ಲೋಪವಲ್ಲದೇ, ಎರಡು ಲೇನ್ಗಳನ್ನು ಸಂಪರ್ಕಿಸುವ ವ್ಯವಸ್ಥೆಯಲ್ಲಿನ ದೋಷದ ಬಗ್ಗೆ ಸಿಬ್ಬಂದಿ ನಿಲ್ದಾಣದ ಮಾಸ್ಟರ್ಗೆ ಮಾಹಿತಿ ನೀಡದೇ ಇರುವುದು ಅಪಘಾತಕ್ಕೆ ಪ್ರಮುಖ ಕಾರಣ ಎಂಬುದನ್ನು ಕೂಡಾ ಸಮಿತಿ ಕಂಡುಕೊಂಡಿದೆ.
ಬಹನಗಾ ನಿಲ್ದಾಣದಲ್ಲಿ ಲೆವೆಲ್ ಕ್ರಾಸಿಂಗ್ ಗೇಟ್ 94ರಲ್ಲಿ ಎಲೆಕ್ಟ್ರಿಕ್ ಲಿಫ್ಟಿಂಗ್ ವ್ಯವಸ್ಥೆ ಬದಲಾಯಿಸುವ ಕಾಮಗಾರಿಗೆ ನಿರ್ದಿಷ್ಟವಾದ ಸರ್ಕ್ಯೂಟ್ ರೇಖಾಚಿತ್ರವನ್ನು ನೀಡದೇ ಇರುವುದು ತಪ್ಪಾದ ವ್ಯವಸ್ಥೆ ಅಳವಡಿಕೆ ಮಾಡಲಾಗಿದೆ. ಇದೇ ಮೊದಲ ದೊಡ್ಡ ತಪ್ಪು ಹೆಜ್ಜೆ ಎಂದು ವರದಿ ಬೊಟ್ಟು ಮಾಡಿ ಹೇಳಿದೆ.
ರೈಲ್ವೆ ಟ್ರ್ಯಾಕ್ ಮೇಲ್ವಿಚಾರಕರ ತಂಡವು ವೈರಿಂಗ್ ಚಿತ್ರಣವನ್ನೇ ಮಾರ್ಪಡಿಸಿದೆ. ಅದನ್ನು ಮೊದಲಿನಂತೆ ಪುನಃಸ್ಥಾಪಿಸಲು ವಿಫಲವಾಗಿದೆ. 2022ರ ಮೇ 16ರಂದು ಆಗ್ನೇಯ ರೈಲ್ವೇಯ ಖರಗ್ಪುರ ವಿಭಾಗದ ಬ್ಯಾಂಕ್ರಾನಯಾಬಾಜ್ ನಿಲ್ದಾಣದಲ್ಲಿ ತಪ್ಪು ವೈರಿಂಗ್ ಮತ್ತು ಕೇಬಲ್ ದೋಷದ ಕಾರಣದಿಂದ ಇದೇ ರೀತಿಯ ಘಟನೆ ನಡೆದಿತ್ತು ಎಂಬುದನ್ನು ವರದಿ ಉದಾಹರಿಸಿದೆ.
ಮಾರ್ಪಾಡಾದ ಲೈನ್ಗಳು ಮತ್ತು ವೈರಿಂಗ್ ಸಮಸ್ಯೆಯ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೆ ದುರಂತವನ್ನು ತಪ್ಪಿಸಬಹುದಿತ್ತು. ಸಿಗ್ನಲಿಂಗ್ ಕಾರ್ಯವನ್ನು ಮಾಡುವಾಗ ಅದರ ಸರ್ಕ್ಯೂಟ್ ಆಲ್ಟರೇಶನ್‌ನಲ್ಲಿನ ಲೋಪಗಳ ಬಗ್ಗೆ ಗಮನ ಹರಿಸಬೇಕಿತ್ತು ಎಂಂದು ವರದಿಯಲ್ಲಿ ಹೇಳಲಾಗಿದೆ. ತಪ್ಪಾದ ಸಿಗ್ನಲ್ ಕಾರಣ ರೈಲು ಪಥ ಬದಲಿಸುವಾಗ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಸಮಿತಿ ತನಿಖೆಯಲ್ಲಿ ಹೇಳಿದೆ.
ಸಮಿತಿಯ ಶಿಫಾರಸುಗಳೇನು?:ರೈಲು ನಿಲ್ದಾಣಗಳ ಬಳಿ ಸಿಗ್ನಲಿಂಗ್ ಸರ್ಕ್ಯೂಟ್‌ಗಳ ಅಳವಡಿಕೆ, ಸಿಗ್ನಲಿಂಗ್ ವೈರಿಂಗ್ ರೇಖಾಚಿತ್ರಗಳು, ಇತರ ದಾಖಲೆಗಳು ಮತ್ತು ಅಕ್ಷರಗಳನ್ನು ನವೀಕರಿಸುವ ಕೆಲಸವಾಗಬೇಕು. ಸಿಗ್ನಲಿಂಗ್ ಮಾರ್ಪಾಡು ಮಾಡಬೇಕಾದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕಿದೆ. ಸಿಗ್ನಲಿಂಗ್ ಸರ್ಕ್ಯೂಟ್‌ಗಳಲ್ಲಿ ಯಾವುದೇ ಬದಲಾವಣೆ ಮಾಡುವ ಮುನ್ನ ಮೊದಲ ನಕ್ಷೆಯಂತೆಯೇ, ಅಧಿಕಾರಿಯ ಸಮ್ಮುಖದಲ್ಲಿ ನಡೆಸಬೇಕು ಎಂದು ಸಲಹೆ ನೀಡಿದೆ. ನವೀಕರಣ ಕಾಮಗಾರಿ ನಡೆಸುವ ಮೊದಲು ಬದಲಿಸಿದ ಸಿಗ್ನಲಿಂಗ್ ಸರ್ಕ್ಯೂಟ್‌ಗಳು ಮತ್ತು ಕೆಲಸವನ್ನು ಪರಿಶೀಲಿಸಲು ಪ್ರತ್ಯೇಕ ತಂಡವನ್ನು ನಿಯೋಜಿಸಬೇಕು ಎಂದು ಅದು ಪ್ರಮುಖವಾಗಿ ಸೂಚಿಸಿದೆ.
ಅಂದು ನಡೆದ ತ್ರಿವಳಿ ರೈಲು ದುರಂತ:ಜೂನ್ 2ರಂದು (ಶುಕ್ರವಾರ) ಸಂಜೆ 7 ಗಂಟೆ ಸುಮಾರಿನಲ್ಲಿ ಒಡಿಶಾದ ಬನಹಗಾ ರೈಲು ನಿಲ್ದಾಣದ ಬಳಿ ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್ ರೈಲು ಚಲಿಸುತ್ತಿದ್ದಾಗಲೇ ಹಳಿ ತಪ್ಪಿತ್ತು. ಇದರಿಂದ ಇನ್ನೊಂದು ಲೈನ್ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಇದರ ರಭಸಕ್ಕೆ ಗೂಡ್ಸ್ ಮತ್ತು ಕೋರಮಂಡಲ್ ರೈಲಿನ ಬೋಗಿಗಳು ಮತ್ತೊಂದು ಹಳಿಯ ಮೇಲೆ ಬಿದ್ದಿವೆ. ಅದೇ ಸಮಯಕ್ಕೆ ವಿರುದ್ಧ ದಿಕ್ಕಿನಿಂದ ಎಸ್‌ಎಂವಿಪಿ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಯಶವಂತಪುರದಿಂದ ಬಂದ ಹೌರಾ ಎಕ್ಸ್‌ಪ್ರೆಸ್ ಹಳಿ ಮೇಲೆ ಬಿದ್ದಿದ್ದ ಬೋಗಿಗಳಿಗೆ ವೇಗವಾಗಿ ಡಿಕ್ಕಿಯಾಗಿದೆ. ಇದರಿಂದ ಸ್ಥಳದಲ್ಲಿ ಭೀಕರತೆ ಉಂಟಾಗಿತ್ತು. ಮೂರು ರೈಲುಗಳ ನಡುವಿನ ತಿಕ್ಕಾಟದಲ್ಲಿ ಈವರೆಗೆ 290 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ:Odisha Train tragedy: ಒಡಿಶಾ ರೈಲು ದುರಂತ: ಡಿಎನ್‌ಎ ಪರೀಕ್ಷೆಯಿಂದ 29 ಶವಗಳ ಗುರುತು ಪತ್ತೆ