ಹೈದರಾಬಾದ್:ದೇಶದಲ್ಲೇ ಪ್ರಖ್ಯಾತವಾದ ಬಾಲಾಪುರ ಗಣೇಶ ಲಡ್ಡು ಈ ಬಾರಿ ದಾಖಲೆಯ ಬೆಲೆಗೆ ಹರಾಜಿನಲ್ಲಿ ಮಾರಾಟವಾಗಿದೆ. ಕಳೆದ ವರ್ಷ 18 ಲಕ್ಷ 90 ಸಾವಿರ ರೂಪಾಯಿಗಳಿಗೆ ಲಡ್ಡು ಮಾರಾಟವಾಗಿತ್ತು. ಈ ವರ್ಷ ಅದಕ್ಕೂ 5 ಲಕ್ಷ 70 ಸಾವಿರ ರೂಪಾಯಿ ಹೆಚ್ಚಿನ ಬೆಲೆಗೆ ಅಂದರೆ, 24 ಲಕ್ಷ 60 ಸಾವಿರ ರೂಪಾಯಿಗೆ ಲಡ್ಡು ಮಾರಾಟವಾಯಿತು. ಬಾಲಾಪುರ ಗಣೇಶ ಉತ್ಸವ ಕಮೀಟಿ ಸದಸ್ಯ ವಂಗೇಟಿ ಲಕ್ಷ್ಮಾರೆಡ್ಡಿ ದಾಖಲೆಯ ಬೆಲೆಗೆ ಲಡ್ಡು ಖರೀದಿಸಿದರು.
9 ದಿನಗಳ ಗಣೇಶ ಹಬ್ಬ ಮುಕ್ತಾಯದ ಹಂತಕ್ಕೆ ಬರುತ್ತಿರುವಂತೆ ಬಾಲಾಪುರ ಗಣೇಶ ಲಡ್ಡುವಿನ ಹರಾಜಿಗಾಗಿ ಕುತೂಹಲ ಹೆಚ್ಚಾಗುತ್ತದೆ. ಈ ವರ್ಷ ಲಡ್ಡು 21 ಕೆಜಿ ತೂಕದ್ದಾಗಿತ್ತು. ಈ ಲಡ್ಡು ಜೀವನದಲ್ಲಿ ಅದೃಷ್ಟ, ಆರೋಗ್ಯ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಭಕ್ತರು ನಂಬಿದ್ದು, ಪ್ರತಿವರ್ಷ ಎರಡೂ ತೆಲುಗು ರಾಜ್ಯಗಳ ಭಕ್ತರು ಲಡ್ಡುಗಾಗಿ ಬಿಡ್ ಮಾಡಲು ಆಗಮಿಸುತ್ತಾರೆ. ಸ್ಥಳೀಯರು ಇದನ್ನು ಬಂಗಾರು ಲಡ್ಡು (ಚಿನ್ನದ ಲಡ್ಡು) ಎಂದೇ ಕರೆಯುತ್ತಾರೆ.
ಲಡ್ಡು ಹರಾಜಿನ ಸಂಪ್ರದಾಯವು 1994 ರಲ್ಲಿ ಪ್ರಾರಂಭವಾಯಿತು. ಬಾಲಾಪುರ ಗ್ರಾಮದ ಕೋಲನ್ ಕೃಷ್ಣಾ ರೆಡ್ಡಿ ಅವರು ಆ ವರ್ಷ ಯಶಸ್ವಿ ಬಿಡ್ಡರ್ ಆಗಿದ್ದರು. ಆಗ ಅವರು 450 ರೂಪಾಯಿಗೆ ಲಡ್ಡು ಪಡೆದಿದ್ದರು. ಕುತೂಹಲಕಾರಿ ವಿಷಯವೆಂದರೆ ಒಂದೇ ಕುಟುಂಬವು ಹೆಚ್ಚಿನ ಹರಾಜುಗಳಲ್ಲಿ ಭಾಗವಹಿಸಿದ್ದು, ಇದುವರೆಗೆ ನಡೆದ ಒಟ್ಟು 26 ಹರಾಜುಗಳ ಪೈಕಿ ಒಂಬತ್ತರಲ್ಲಿ ಯಶಸ್ಸನ್ನು ದಾಖಲಿಸಿದೆ. ಹರಾಜಿನಿಂದ ಬಂದ ಮೊತ್ತವನ್ನು ಬಾಲಾಪುರದ ದೇವಸ್ಥಾನ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ.
ಬಾಲಾಪುರದ ಸ್ಥಳೀಯರಲ್ಲದೆ ಬಿಲ್ಡರ್‌ಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ರಾಜಕಾರಣಿಗಳು ಹರಾಜಿನಲ್ಲಿ ಭಾಗವಹಿಸುತ್ತಾರೆ. ಹರಾಜು ಪ್ರಕ್ರಿಯೆಯು 10-15 ನಿಮಿಷಗಳವರೆಗೆ ನಡೆಯುತ್ತದೆ. ಹರಾಜನ್ನು 2100 ರೂಪಾಯಿಗಳಿಂದ ಆರಂಭಿಸಲಾಗುತ್ತದೆ. ಹರಾಜಿಗೂ ಮುನ್ನ ಗಣೇಶನಿಗೆ ಪೂಜೆ ಸಲ್ಲಿಸಿದ ನಂತರ ಬೆಳಗ್ಗೆ 5.30 ರ ಸುಮಾರಿಗೆ ಗಣೇಶನ ಮೆರವಣಿಗೆ ಆರಂಭವಾಗುತ್ತದೆ. ಇದು ಸುಮಾರು ಮೂರು ಗಂಟೆಗಳ ಕಾಲ ಬಾಲಾಪುರ ಗ್ರಾಮದ ಓಣಿ ಮತ್ತು ಬೈಲೇನ್‌ಗಳಲ್ಲಿ ಹಾದು ಬೆಳಗ್ಗೆ 8.30 ಕ್ಕೆ ದೇವಸ್ಥಾನವನ್ನು ತಲುಪುತ್ತದೆ. ಈ ಸಂದರ್ಭದಲ್ಲಿ ಹರಾಜು ಆರಂಭಿಸಲಾಗುತ್ತದೆ.
ಬಿಡ್‌ದಾರರು ಬಾಲಾಪುರ ಗ್ರಾಮದ ಹೊರಗಿನವರಾಗಿದ್ದು, ಲಡ್ಡು ಪಡೆದುಕೊಂಡರೆ ಅವರು ಅದೇ ದಿನ ಸಂಪೂರ್ಣ ಬಿಡ್ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ವಿಜೇತರು ಬಾಲಾಪುರ ಗ್ರಾಮದವರಾಗಿದ್ದರೆ ಅವರು ಒಂದು ವರ್ಷದೊಳಗೆ ಮೊತ್ತವನ್ನು ಪಾವತಿಸಬಹುದು.