ನವದೆಹಲಿ :ಭಾರತೀಯ ಸೇನೆ ಅಸಾಧಾರಣ ಶೌರ್ಯ, ಸಾಹಸವನ್ನು ಮೆರೆದ ಬಾಲಕೋಟ್ ವೈಮಾನಿಕ ಕಾರ್ಯಾಚರಣೆಗೆ ಮೂರು ವರ್ಷ ತುಂಬಿದೆ. ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪ್ರತೀಕಾರ ತೀರಿಸಿಕೊಂಡ ಸೇನೆಯನ್ನು ಇಂದು ದೇಶ ಸ್ಮರಿಸುತ್ತದೆ.
ಜಮ್ಮು ಕಾಶ್ಮೀರದ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಜಮ್ಮು - ಶ್ರೀನಗರ ಹೆದ್ದಾರಿಯಲ್ಲಿ 2019ರ ಫೆಬ್ರವರಿ 14ರಂದು ಸಿಆರ್ಪಿಎಫ್ ತುಕಡಿಗಳು ತೆರಳುತ್ತಿದ್ದ ವಾಹನದ ಮೇಲೆ ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕ ಸಂಘಟನೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 40 ಮಂದಿ ವೀರ ಯೋಧರು ಹುತಾತ್ಮರಾಗಿದ್ದರು. ಈ ದಾಳಿ ಅತ್ಯಂತ ಘೋರವಾಗಿದ್ದು, ಭಾರತೀಯರ ರಕ್ತ ಕುದಿಯುವಂತೆ ಮಾಡಿತ್ತು.
ಇದಾದ ಕೆಲವೇ ದಿನಗಳಲ್ಲಿ ಅಂದರೆ ಫೆಬ್ರವರಿ 26ರಂದು ಮುಂಜಾನೆ ಭಾರತೀಯ ವಾಯುಪಡೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದ್ದು, ಲೈನ್ ಆಫ್ ಕಂಟ್ರೋಲ್ (ಎಲ್ಒಸಿ) ನುಗ್ಗಿ ಪಾಕಿಸ್ತಾನದೊಳಗಿನ ಭಯೋತ್ಪಾದಕರನ್ನು ಸದೆಬಡೆದಿತ್ತು. ಬಾಲಕೋಟ್ನಲ್ಲಿದ್ದ ಜೈಷ್ ಸಂಘಟನೆಯ ಶಿಬಿರದ ಮೇಲೆ ವಾಯುಪಡೆ ದಾಳಿ ನಡೆಸಿತ್ತು. ಈ ವೇಳೆ ಸಾಕಷ್ಟು ಭಯೋತ್ಪಾದಕರನ್ನು ಬೇಟೆಯಾಡುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಲಾಯಿತು.