ಜಬಲ್ಪುರ (ಮಧ್ಯಪ್ರದೇಶ): ಕರ್ನಾಟಕದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಕಟಿಸಿರುವ ಪ್ರಣಾಳಿಕೆಯು ವಿವಾದಕ್ಕೆ ಕಾರಣವಾಗಿದೆ. ಈ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧಿಸುವ ಕುರಿತು ಕಾಂಗ್ರೆಸ್ ಘೋಷಿಸಿದೆ ಎಂದು ಆರೋಪಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಇದರ ನಡುವೆ ಮಧ್ಯಪ್ರದೇಶದ ಜಬಲ್ಪುರದ ಕಾಂಗ್ರೆಸ್ ಕಚೇರಿ ಮೇಲೆ ಬಜರಂಗ ದಳದ ಕಾರ್ಯಕರ್ತರು ದಾಳಿ ಮಾಡಿದ್ದಾರೆ.
ಬಜರಂಗ ದಳವನ್ನು ನಿಷೇಧಿಸುವ ಕುರಿತ ಕರ್ನಾಟಕ ಕಾಂಗ್ರೆಸ್ ಪ್ರಣಾಳಿಕೆ ವಿರೋಧಿಸಿ ಕಾಂಗ್ರೆಸ್ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುವುದಾಗಿ ಬಜರಂಗ ದಳದ ಕಾರ್ಯಕರ್ತರು ನಿನ್ನೆ ಘೋಷಿಸಿದ್ದರು. ಅಂತೆಯೇ, ಇಂದು ಬಲದೇವ್ ಬಾಗ್ನಲ್ಲಿರುವ ಕಾಂಗ್ರೆಸ್ ಕಚೇರಿಯ ಮುಂದೆ ಪ್ರತಿಭಟನೆಗೆ ಆಗಮಿಸಿದ್ದರು. ಸುಮಾರು ಅರ್ಧ ಗಂಟೆ ರಸ್ತೆಯಲ್ಲೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ:ಬಜರಂಗದಳ ಬ್ಯಾನ್ ಮಾಡುವುದು ಮೂರ್ಖತನದ ಪರಮಾವಧಿ : ಬಿ ವೈ ವಿಜಯೇಂದ್ರ
ಆದರೆ, ನಂತರ ಇದ್ದಕ್ಕಿದ್ದಂತೆ ಪ್ರತಿಭಟನಾನಿರತ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಮತ್ತು ಕಟ್ಟಡದ ಕಡೆಗೆ ತಿರುಗಿದರು. ಕಾಂಗ್ರೆಸ್ ಕಚೇರಿಗೆ ನುಗ್ಗಿ ಕಲ್ಲು ತೂರಾಟ ನಡೆಸಿದರು. ಇದೇ ವೇಳೆ ಅಕ್ಕ-ಪಕ್ಕದ ಖಾಸಗಿ ಆಸ್ತಿ-ಪಾಸ್ತಿಗೂ ಹೆಚ್ಚಿನ ಹಾನಿಯಾಗಿದೆ. 100ಕ್ಕೂ ಹೆಚ್ಚು ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ. ಮತ್ತೊಂದೆಡೆ, ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರು, ಬಜರಂಗ ದಳದ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಆದರೆ, ಈ ವೇಳೆ ಒಬ್ಬ ಪೊಲೀಸ್ ಕೂಡ ಸ್ಥಳದಲ್ಲಿ ಇರಲಿಲ್ಲ ಎಂದು ದೂರಿದ್ದಾರೆ.