ನವದೆಹಲಿ:ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದು, ಇತರ ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಸೆಂಟ್ರಲ್ ದೆಹಲಿಯ ರಂಜಿತ್ ನಗರದಲ್ಲಿ ನಡೆದಿದೆ. ಮೃತರನ್ನು ನಿತೇಶ್ ಎಂದು ಗುರುತಿಸಲಾಗಿದ್ದು, ಇವರು ಬಜರಂಗ ದಳದ ಕಾರ್ಯಕರ್ತ ಎನ್ನಲಾಗ್ತಿದೆ.
ನಿತೇಶ್ ಅವರನ್ನು ಹಿಂದೂ ಮತ್ತು ಬಜರಂಗ ದಳದ ಕಾರ್ಯಕರ್ತ ಎಂಬ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಬಿಜೆಪಿ ನಾಯಕ ಮತ್ತು ಸುಪ್ರೀಂಕೋರ್ಟ್ ವಕೀಲ ಪ್ರಶಾಂತ್ ಉಮಿಯಾವೋ ಟ್ವೀಟ್ ಮಾಡಿ ಆರೋಪಿಸಿದ್ದಾರೆ. ಆದರೆ, ಪೊಲೀಸರು ಇದನ್ನು ತಳ್ಳಿಹಾಕಿದ್ದು, ಇದು ಎರಡು ಗುಂಪುಗಳ ನಡುವಿನ ಜಗಳವಾಗಿದೆ. ಈ ವಿಷಯದಲ್ಲಿ ಯಾವುದೇ ಕೋಮು ವಿಷಯವಿಲ್ಲ ಎಂದು ಹೇಳಿದ್ದಾರೆ.
ಶುಕ್ರವಾರ ಶಾದಿಪುರ ಪ್ರದೇಶದಲ್ಲಿ ಎರಡು ಗುಂಪುಗಳು ಹೊಡೆದಾಡಿಕೊಂಡಿವೆ. ಕೊಲೆಯಾದ ನಿತೇಶ್, ಅಲೋಕ್ ಮತ್ತು ಮಾಂಟಿ ಎಂಬುವವರು ಒಂದು ಗುಂಪಿನಲ್ಲಿದ್ದರೆ, ಎದುರಾಳಿ ಗುಂಪಿನಲ್ಲೂ ಮೂವರು ಯುವಕರಿದ್ದರು. ಎರಡೂ ಕಡೆಗಳಿಂದ ವಾಗ್ವಾದ ನಡೆದು ನಂತರ ವಿಕೋಪಕ್ಕೆ ತಿರುಗಿದೆ. ಈ ಘಟನೆಯಲ್ಲಿ ನಿತೇಶ್ ಮತ್ತು ಅಲೋಕ್ ಎಂಬುವವರು ತೀವ್ರ ಗಾಯಗೊಂಡಿದ್ದು, ಚಿಕಿತ್ಸೆ ಫಲಿಸದೇ ನಿತೇಶ್ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಘಟನೆ ತನಿಖೆಗೆ ಈಗಾಗಲೇ ವಿಶೇಷ ಪೊಲೀಸ್ ತಂಡ ರಚಿಸಲಾಗಿದ್ದು, ಘಟನೆಯ ಸಿಸಿಟಿವಿ ದೃಶ್ಯಾವಳಿ ಸಹ ಪೊಲೀಸರಿಗೆ ಸಿಕ್ಕಿವೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಗುರುತಿಸಲಾಗಿದೆ. ನಿತೇಶ್ ಮತ್ತು ಅಲೋಕ್ ವಿರುದ್ಧ ಈ ಹಿಂದೆ ಕ್ರಿಮಿನಲ್ ಕೇಸ್ಗಳು ದಾಖಲಿದ್ದು, ಇನ್ನೊಂದು ಗುಂಪಿನ ಆರೋಪಿಗಳಾದ ಉಫಿಜಾ, ಅದ್ನಾನ್ ಮತ್ತು ಅಬ್ಬಾಸ್ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ ರೌಡಿಶೀಟರ್ ಮೇಲೆ ಮಾರಣಾಂತಿಕ ಹಲ್ಲೆ.. ಆರೋಪಿ ನಾಪತ್ತೆ